ಹೊನ್ನಾವರ : ಛಾಯಾಚಿತ್ರ ಪ್ರದರ್ಶನ

Update: 2017-08-22 14:30 GMT

ಹೊನ್ನಾವರ,ಆ.22 : ಬಾಲ್ಯದಿಂದ ವೃದ್ಧಾಪ್ಯದವರೆಗಿನ ಎಲ್ಲಾ ಸಂತೋಷ ದುಃಖ ಮೊದಲಾದ ಮನುಷ್ಯನ ವಿವಿಧ ಕ್ಷಣದ ಭಾವನೆಗಳನ್ನು ಛಾಯಾಚಿತ್ರಗಳು ಸ್ಥಿರಗೊಳಿಸಿ, ಪುನಃ ನೋಡಿದಾಗ ಮನಸ್ಸಿನ ಮೇಲೆ ಪ್ರಭಾವಬೀರುತ್ತದೆ. ಆದ್ದರಿಂದ ಛಾಯಾಗ್ರಹಣ ಶ್ರೇಷ್ಠಕಲೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ.ಚೆನ್ನಕೇಶವ ರೆಡ್ಡಿ ಹೇಳಿದ್ದಾರೆ.

ಅವರು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಅತಿಥಿಗಳಾದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಧುಕರ ಪಿ. ಭಾಗವತ ಮಾತನಾಡಿ ಕಣ್ಣಿನಿಂದ ಕಂಡಿದ್ದನ್ನು ಶಾಶ್ವತಗೊಳಿಸುತ್ತದೆ ಎಂದರು.

ತಾಲೂಕಾ ಪತ್ರಕರ್ತರ ಸಂಘ, ನ್ಯೂ ಇಂಗ್ಲೀಷ್ ಸ್ಕೂಲ್, ಇಕೋ ಕ್ಲಬ್, ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯೂ ಇಂಗ್ಲೀಷ್ ಶಾಲೆಯ ಅಧ್ಯಕ್ಷ ಜಗದೀಶ್ ಪೈ, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್.ಎನ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಹೆಸರಾಂತ ನಿಸರ್ಗ ಛಾಯಾಗ್ರಾಹಕ ಕಾರವಾರದ ಪಾಡುರಂಗ ಹರಿಕಂತ್ರರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು ಕಡಲ ತಡಿಯಲ್ಲಿ ಪರಿಸರದ ಮಡಿಲಲ್ಲಿ ಜನಿಸಿದ ನಾನು ಮೀನುಗಾರಿಕಾ ಇಲಾಖೆಯ ವಾಹನ ಚಾಲಕನಾಗಿ ಕೆಲಸ ಆರಂಭಿಸಿ, ಛಾಯಾಗ್ರಾಹಕನಾಗಿ ರೂಪುಗೊಳ್ಳಲು ಜಿಲ್ಲೆಯ ಪ್ರಕೃತಿ ಕಾರಣ ಎಂದು ಹೇಳಿದರು.

ಡಾ. ಪ್ರಮೋದ ಶಾನಭಾಗ, ಭವಾನಿ ಹೊನ್ನಾವರ, ಪ್ರೊ. ಶ್ರೀಪಾದ ಶೆಟ್ಟಿ, ಅಜಿತ್ ಬೊಪ್ಪನಹಳ್ಳಿ, ಸುನಯನಾರಾವ್, ಗುರುರಾಜ, ಚೈತ್ರಾ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು

ಮುಖ್ಯಾಧ್ಯಾಪಕ ಅವಧಾನಿ ಸ್ವಾಗತಿಸಿದರು. ಅಶೋಕ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News