ಕುಂದಾನಗರಿಯಲ್ಲಿ ಲಿಂಗಾಯತರ ಶಕ್ತಿ ಪ್ರದರ್ಶನ

Update: 2017-08-22 14:38 GMT

ಬೆಳಗಾವಿ,ಆ.23: ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಗೆ ಆಗ್ರಹಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಲಿಂಗಾಯತರ ಶಕ್ತಿ ಪ್ರದರ್ಶನವಾಯಿತು. ಬಸವಾದಿ ಶರಣ ಪರಂಪರೆಯ ವಿರಕ್ತಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಮಾವೇಶಕ್ಕೆ 50ಕ್ಕೂ ಅಧಿಕ ಮಠಾಧೀಶರು, ರಾಜಕೀಯ ಮುಖಂಡರು ಸೇರಿದಂತೆ ಸಾವಿರಾರು ಜನರು ಸಾಕ್ಷಿಯಾದರು.

ಮಂಗಳವಾರ ಕುಂದಾನಗರಿಯ ಲಿಂಗರಾಜ ಕಾಲೇಜು ಮೈದಾನ ಬಸವಮಯವಾಗಿತ್ತು. ಬಸವಾನುಯಾಯಿಗಳು ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಸಮಾವೇಶದುದ್ದಕ್ಕೂ ವೀರಶೈವ ಮಹಾಸಭೆಯ ಪರ್ಯಾಯವಾಗಿ ಅಖಿಲ ಭಾರತ ಲಿಂಗಾಯತ ಮಹಾಸಭಾವನ್ನು ಅಸ್ತಿತ್ವಕ್ಕೆ ತರಲು ಘೋಷಣೆಗಳು ಮೊಳಗಿದವು.

ಬೃಹತ್ ಮೆರವಣಿಗೆ:  ಸಮಾವೇಶ ಮುಗಿದ ನಂತರ ಬೋಗಾರವೇಸ್, ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಶನಿವಾರ ಕೂಟ, ಚನ್ನಮ್ಮ ವೃತ್ತದ ವರೆಗೂ ಸಹಸ್ರಾರು ಸಂಖ್ಯೆಯಲ್ಲಿ ಬೃಹತ್ ಮೆರವಣಿಗೆ ಸಾಗಿತು. ಮೆರವಣಿಗೆ ನಂತರ ಚನ್ನಮ್ಮ ವೃತ್ತದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಹೋರಾಟದಲ್ಲಿ ಹಲವು ಸ್ವಾಮೀಜಿಗಳು, ಜನಪ್ರತಿನಿಧಿಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯ ಹಾಗೂ ಜಿಲ್ಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ಇದರ ನಡುವೆ ಬಿಜೆಪಿ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ನಿರ್ಣಯ ಮಂಡನೆ: ಲಿಂಗಾಯತ ಧರ್ಮ ಹಿಂದೂ ಧರ್ಮದಿಂದ ಭಿನ್ನವಾದ ಸ್ವತಂತ್ರ ಧರ್ಮ. ಈಗಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳಲ್ಲಿ ಲಿಂಗಾಯತ ಸ್ವತಂತ್ರ ಎಂದು ತೀರ್ಪು ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮನ್ನಿಸಿ ಲಿಂಗಾಯತ ಸ್ವತಂತ್ರಧರ್ಮ ಎಂದು ಸಾಂವಿಧಾನಿಕ ಮಾನ್ಯತೆ ನೀಡಬೇಕು ಬಸವರಾಜ ಹೊರಟ್ಟಿ ನಿರ್ಣಯ ಮಂಡಿಸಿದರು.

ಮುಂದಿನ ಹೋರಾಟ: ಸೆಪ್ಟೆಂಬರ್ 3 ರಂದು ಮಹಾರಾಷ್ಟ್ರದ ಲಾತೂರ, ಸೆ.10 ರಂದು ಕಲಬುರಗಿ, ಸೆ.28 ಚಿತ್ರದುರ್ಗ, ಬಸವಕಲ್ಯಾಣದಲ್ಲಿ ನವೆಂಬರ್ 25-26 ರಂದು ಲಿಂಗಾಯತ ಮಹಾಅಧಿವೇಶನ ನಡೆಯಲಿದೆ.
ಈ ಸಮಾವೇಶದಲ್ಲಿ 50ಕ್ಕೂ ಅಧಿಕ ಮಠಾಧೀಶರು, ಸಚಿವ ವಿನಯ್ ಕುಲಕರ್ಣಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಪ್ರಕಾಶ್ ಹುಕ್ಕೇರಿ, ಶಾಸಕ ಅಶೋಕ್ ಖೇಣಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News