ಆಶ್ರಯ ನಿವೇಶನದ ಹಕ್ಕು ಪತ್ರ ನೀಡಲು ಆಗ್ರಹಿಸಿ ಧರಣಿ

Update: 2017-08-22 14:56 GMT

ಹಾಸನ,ಆ.22: ಕೊಳಚೆ ಪ್ರದೇಶ ನಿವಾಸಿಗಳಿಗೆ ಆಶ್ರಯ ನಿವೇಶನದ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ರಾಜ್ಯ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ (ಕೆಕೆಎನ್‍ಎಸ್‍ಎಸ್)ಯಿಂದ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ಬಂದ ಅವರು, ಜಿಲ್ಲೆಯ ಬೇಲೂರು ತಾಲೂಕು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಪಂಪ್‍ಹೌಸ್ ಬಳಿ ಸಂತೆ ಮೈದಾನ ಕೊಳಚೆ ಪ್ರದೇಶದಲ್ಲಿ ಕಳೆದ 28 ವರ್ಷಗಳಿಂದ ಕೂಲಿ ಮಾಡಿಕೊಂಡು ಕಡು ಬಡತನದಿಂದ ಜೀವನ ಸಾಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು 57 ಕುಟುಂಬಗಳು ಮೂಲಭೂತ ಸೌಕರ್ಯದಿಂದ ಹಾಗೂ ವಸತಿಯೋಜನೆಯಿಂದ ವಂಚಿತರಾಗಿದ್ದಾರೆ ಎಂದರು. ಶೌಚಾಲಯ ಉಪಯೋಗಿಸಲು ಬಸ್‍ನಿಲ್ದಾಣಕ್ಕೆ ಹಣ ಕೊಟ್ಟು ಹೋಗಬೇಕಾಗಿದೆ. ಕಳೆದ ವರ್ಷ ಪುರಸಭೆ ವತಿಯಿಂದ ನಾಲ್ಕು ಸಮುದಾಯ ಶೌಚಾಲಯವನ್ನು ನಿರ್ಮಿಸಿಕೊಡಲಾಗಿದೆ ಎಂದು ಹೇಳಿದರು.

ಹಲವಾರು ಬಾರಿ ಹೊರಾಟ ಮಾಡಿದ್ದರಿಂದ ಅಧಿಕಾರಿಗಳು ಸ್ಪಂದಿಸಿ ಶಾಶ್ವತ ನಿವೇಶನ ವಸತಿಯನ್ನು ಕಲ್ಪಿಸಿಕೊಡುವ ಭರವಸೆಯನ್ನು ನೀಡಿದ್ದರು. ಆದರೇ ಬೇಲೂರು ಕ್ಷೇತ್ರದ ಶಾಸಕರು ಸಹ ಅದೆ ಜಾಗ ಪರಿಶೀಲಿಸಿ ಸಂತೆ ಮೈದಾನದ ಜಾಗ ಯಾರಿಗೆ ಸೇರುತ್ತದೆ ಎಂಬುದನ್ನು ಖಾತ್ರಿಪಡಿಸಿದ ಬಳಿಕ ನಿವೇಶನ ಕೊಡುವ ಭರವಸೆ ನೀಡಲಾಗಿತ್ತು. ಜೊತೆಗೆ ಯಾರಿಂದಲೂ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಲಾಗಿತ್ತು ಎಂದರು.

ಬಂಟೇನಹಳ್ಳಿ ಆಶ್ರಯ ಬಡಾವಣೆಯಲ್ಲಿ ಈ ಹಿಂದೆ ಪುರಸಭೆ ಆಶ್ರಯ ಕಮಿಟಿಯಲ್ಲಿ ತೆಗೆದುಕೊಂಡಿರುವ ನಿರ್ಧಾರದಂತೆ ಮೊದಲ ಆಧ್ಯತೆಯನ್ನು ಕೊಳಗೇರಿ ಕುಟುಂಬಗಳಿಗೆ ನೀಡಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ವಸತಿ ನಿರ್ಮಿಸಿ ಇಲ್ಲವೇ ಕರ್ನಾಟಕ ಸರಕಾರದ ಬೇರೆ ಯಾವುದಾದರೂ ವಸತಿ ಯೋಜನೆಯಡಿ ತುರ್ತು ವಸತಿಯನ್ನು ಕಲ್ಪಿಸಿಕೊಟ್ಟು, ನಂತರ ಗುಡಿಸಲುಗಳನ್ನು ಅಲ್ಲಿಯ ನಿವಾಸಿಗಳೇ ತೆರವುಗೊಳಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಹಿಂದೆ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ. ಕೂಡಲೇ ಮಾನವೀಯತೆ ದೃಷ್ಠಿಯಿಂದ ಬಡವರಿಗೆ ಬದುಕಲು ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಪ್ರತಿಭಟನೆಯ ರಾಜ್ಯ ಸಂಚಾಲಕ ಹೆಚ್.ಟಿ. ರಾಮೇಗೌಡ, ತಾಲೂಕು ಅಧ್ಯಕ್ಷ ಹೆಚ್. ವೆಂಕಟೇಶ್, ತಾಲೂಕು ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ರಘು ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News