ಕಾಂಗ್ರೆಸ್ ಪಕ್ಷಕ್ಕೆ ಟಿ.ಪಿ.ರಮೇಶ್ ರಾಜಿನಾಮೆ

Update: 2017-08-22 15:31 GMT

ಮಡಿಕೇರಿ, ಆ.22 : ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಬಾರ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ.
ಆಗಸ್ಟ್ 15 ರಂದು ನಗರದ ಕೋಟೆ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ಟಿ.ಪಿ. ರಮೇಶ್ ಅವರು, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ಕೈಯನ್ನು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ತೀವ್ರ ಟೀಕೆಗೆ ಒಳಗಾಗಿದ್ದರು. ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ವಿವಿಧ ಕೊಡವ ಸಮಾಜಗಳು ರಮೇಶ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು.

ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಕೂಡ ಕೆಲವರಿಂದ ಟಿ.ಪಿ. ರಮೇಶ್ ವಿರುದ್ಧದ ಧ್ವನಿ ವ್ಯಕ್ತವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರು ರಾಜೀನಾಮೆಯನ್ನು ಬಯಸಿದ್ದರಿಂದ ಇಂದು ಮುಖ್ಯ ಮಂತ್ರಿಯಾದಿಯಾಗಿ ಪಕ್ಷದ ಪ್ರಮುಖರಿಗೆ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದರು. 
ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರುಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಟಿ.ಪಿ. ರಮೇಶ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಆಗಸ್ಟ್ 15 ರಂದು ನಡೆದ ಘಟನೆಯ ಕುರಿತು ಸತ್ಯಾಂಶದ ವರದಿಯನ್ನು ಲಗತ್ತಿಸಿರುವುದಾಗಿ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಸೂಚನೆಯಂತೆ ತಾವು ನನ್ನನ್ನು ನೇಮಿಸಿದ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಅಲ್ಲದೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಅಹಿಂದ ವರ್ಗಕ್ಕೆ ಸೇರಿದ ನಾನು ಇಲ್ಲಿಯವರೆಗೆ ತಾವು ಕಂಡುಕೊಂಡಂತೆ ನಡೆದುಕೊಂಡಿದ್ದೇನೆ ಎಂದು ನಮೂದಿಸಿದ್ದಾರೆ.
ಕಳೆದ ನಲ್ವತ್ತು ವರ್ಷಗಳಿಂದ ವಿವಿಧ ಸಂಘ ಸಂಸ್ಥೆ ಮತ್ತು ರಾಜಕೀಯವಾಗಿ ಸಕ್ರಿಯರಾಗಿದ್ದ ರಮೇಶ್ ಅವರ ಮುಂದಿನ ನಡೆ ನಿಗೂಢವಾಗಿದ್ದು, ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News