ಜೆಡಿಎಸ್ ಪರ ಅಲೆಯನ್ನು ಚುನಾವಣೆಯಲ್ಲಿ ಮತಗಳನ್ನಾಗಿ ಪರಿವರ್ತಿಸಬೇಕು: ಎಚ್.ಕೆ.ಕುಮಾರಸ್ವಾಮಿ

Update: 2017-08-22 19:05 GMT

ಚಿಕ್ಕಮಗಳೂರು, ಆ.22: ರಾಜ್ಯಾದ್ಯಂತ ಎದ್ದಿರುವ ಜೆಡಿಎಸ್ ಪರ ಅಲೆಯನ್ನು ಮುಂಬರುವ ಚುನಾವಣೆಯಲ್ಲಿ ಮತಗಳನ್ನಾಗಿ ಪರಿವರ್ತಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವ, ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕರೆ ನೀಡಿದರು.

 ಅವರು ಮಂಗಳವಾರ ನಗರದ ಜೆಡಿಎಸ್ ಕಛೇರಿಯಲ್ಲಿ ನಡೆದ ಪಕ್ಷದ ಪ.ಜಾತಿ/ಪ.ಪಂಗಡ ವಿಭಾಗದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿಯ ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಜನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ. ಈ ಸಂದರ್ಭವನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಮರ್ಪಕವಾಗಿ ಬಳಸಿಕೊಂಡು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಹೇಳಿದರು.

 ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ರಾಜ್ಯಕ್ಕೆ ಈಗಾಗಲೇ ಭ್ರಷ್ಟಾಚಾರದಲ್ಲಿ ನಂ.1 ಪಟ್ಟ ದೊರೆತಿದೆ. ಜೆಡಿಎಸ್ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಜನಪರ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಕಾಂಗ್ರೆಸ್ ತನ್ನದೆಂದು ಬಿಂಬಿಸುತ್ತಿದೆ ಎಂದು ಆರೋಪಿಸಿದರು.

 ಕಾಂಗ್ರೆಸ್ ಮತ್ತು ಬಿಜೆಪಿಯವರು ಈ ಹಿಂದೆ ಕಾಲೋನಿಗಳತ್ತ ಮುಖ ಮಾಡುತ್ತಿರಲಿಲ್ಲ. ಆದರೆ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಮನೆಮನೆಗಳಿಗೆ ತೆರಳಿ ಉಪಹಾರ ಸೇವಿಸುವ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಪ.ಜಾತಿ ಮತ್ತು ವರ್ಗದವರು ಇದನ್ನು ಅರ್ಥಮಾಡಿಕೊಳ್ಳಬೇಕು. ಸಂಘಟಿತರಾಗಿ ಜೆಡಿಎಸ್ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.

 ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಪಜಾತಿ ಮತ್ತು ಪಂಗಡದ ರಾಜ್ಯ ಸಮಾವೇಶವನ್ನು ಮುಂದಿನ ತಿಂಗಳು ಹಮ್ಮಿಕೊಳ್ಳಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಈ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

  ಪ.ಜಾತಿ/ಪ.ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಆರ್.ದೇವಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

   ಜಿಲ್ಲಾಧ್ಯಕ್ಷ ರಂಜನ್‍ಅಜಿತ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್, ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಪಕ್ಷದ ಮುಖಂಡರಾದ ಮಂಜಪ್ಪ, ಎಂ.ಡಿ.ರಮೇಶ್, ಮುನಿವೆಂಕಟಪ್ಪ, ಹೆಚ್.ಜಿ.ವೆಂಕಟೇಶ್, ಹಳೇಹಟ್ಟಿ ಆನಂದನಾಯ್ಕ, ಮಹೇಶ್, ಚಿದಾನಂದ್, ಜಯರಾಜ್ ಅರಸ್, ಡಿ.ಜೆ.ಸುರೇಶ್, ಜಮೀಲ್ ಅಹಮದ್, ನಿಖಿಲ್ ಚಕ್ರವರ್ತಿ, ಸುಮಾ ನಾಗೇಶ್, ಜ್ಯೋತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News