ರಾಜ್ಯದ 15 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗುವುದು: ಎಚ್.ಕೆ. ಪಾಟೀಲ್

Update: 2017-08-22 16:53 GMT

ತುಮಕೂರು,ಆ.22: ಅ. 2ರವೇಳೆಗೆ ರಾಜ್ಯದ 15 ಜಿಲ್ಲೆಗಳನ್ನು ಸಂಪೂರ್ಣ ಬಯಲು ಶೌಚ ಮುಕ್ತವೆಂದು ಘೋಷಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸಿದ್ಧಗಂಗಾ ಮಠದಲ್ಲಿಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್, ತುಮಕೂರು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮಪಂಚಾಯತ್‌ಗಳ ಸಹಯೋಗದೊಂದಿಗೆ ನಡೆದ 73ನೆ ಸಂವಿಧಾನ ತಿದ್ದುಪಡಿ ಮತ್ತು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ರಜತ ವರ್ಷಾಚರಣೆ ಮತ್ತು ಪಂಚಾಯತ್ ರಾಜ್ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾದ ಅವರು, ಕಳೆದ 4 ವರ್ಷಗಳಿಂದ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳು ಬಹಿರ್ದೆಸೆ ಮುಕ್ತವಾಗಬೇಕು ಎಂದು ಪ್ರಯತ್ನಿಸುತ್ತಿದ್ದು, ಕೆಲ ಜಿಲ್ಲೆಗಳು ಇಂದಿಗೂ ಶೇ. 70 ರಷ್ಟು ಪ್ರಗತಿಯನ್ನು ಸಾಧಿಸಿಲ್ಲ. ಆದುದರಿಂದ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಜನರ ಸಹಭಾಗಿತ್ವ ಪಡೆದು ಆದಷ್ಟು ಬೇಗ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾರ್ಪಾಡಿಸಲು ಪಣ ತೊಡಬೇಕು ಎಂದರು.

ಅ. 2ರಂದು ರಾಜ್ಯದ 15 ಜಿಲ್ಲೆಗಳನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸಲು ತೀರ್ಮಾನಿಸಲಾಗಿದೆ. ಗಾಂಧೀಜಿಯವರು ಕಂಡ ಕನಸು ಕರ್ನಾಟಕದಲ್ಲಿ ನನಸು ಮಾಡಿದ್ದೇವೆ.ಹಲವು ತಿದ್ದುಪಡಿಗಳ ನಂತರ ರಾಜ್ಯದ ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆಯನ್ನು ಹೊಸದಾಗಿ ರೂಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಶಾಸಕ ಬಿ.ಸುರೇಶ್‌ಗೌಡ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಶಾಸಕರಾದ ಸುಧಾಕರಲಾಲ್, ಕಾಂತರಾಜು ಬಿ.ಎಂ.ಎಲ್., ಕೇಂದ್ರ ಸರಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಟಿ.ಆರ್.ರಘುನಂದನ್ ಜಿಪಂ ಸಿಇಒ ಕೆ.ಜಿ.ಶಾಂತಾರಾಮ ಮತ್ತಿತರರು ಭಾಗವಹಿಸಿದ್ದರು. 

ಸಮಾರಂಭಕ್ಕೂ ಮುನ್ನ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ 9 ಇಲಾಖೆಗಳು ಏರ್ಪಡಿಸಿದ್ದ ಮಳಿಗೆಗಳಿಗೆ ಸಚಿವರು ಭೇಟಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News