ದಾವಣಗೆರೆ: ಬ್ಯಾಂಕ್ ಮುಷ್ಕರ

Update: 2017-08-22 18:57 GMT

ದಾವಣಗೆರೆ,ಆ.22:ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಜಿಲ್ಲಾ ಘಟಕದಿಂದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ಗಳ ರಾಷ್ಟ್ರೀಕರಣ ವಿರೋಧಿಸಿ ನಗರದಲ್ಲಿ ಮಂಗಳವಾರ ಬ್ಯಾಂಕ್ ಮುಷ್ಕರ ನಡೆಸಲಾಯಿತು.

ನಗರದ ಮಂಡಿಪೇಟೆ ಕೆನರಾ ಬ್ಯಾಂಕ್ ಎದುರು ವೇದಿಕೆ ನೇತೃತ್ವದಲ್ಲಿ ಬ್ಯಾಂಕ್ ಬಂದ್ ಮಾಡುವ ಮೂಲಕ ಮುಷ್ಕರ ನಡೆಸಿದ ಬ್ಯಾಂಕ್ ಅಧಿಕಾರಿ, ನೌಕರರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ವೇದಿಕೆ ಜಿಲ್ಲಾ ಸಂಚಾಲಕ ಕೆ. ರಾಘವೇಂದ್ರ ನಾಯರಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ಗಳ ಖಾಸಗೀಕರಣ ಮಾಡಬಾರದು. ಬ್ಯಾಂಕ್‍ಗಳ ವಿಲೀನೀಕರಣಕ್ಕೆ ಕೈ ಹಾಕಬಾರದು. ಖಾಸಗಿ ಬಂಡವಾಳ ಶಾಹಿಗಳ ಮನ್ನಾ ಕೆಲಸ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಅವರು, ಉದ್ದೇಶ ಪೂರ್ವಕವಾಗಿ ಸಾಲ ಮರು ಪಾವತಿಸದ ಖಾಸಗಿ ಬಂಡವಾಳ ಶಾಹಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಸಾಲ ವಸೂಲಾತಿಗೆ ಸಂಸದೀಯ ಸಮಿತಿ ಮಾಡಿರುವ ಶಿಫಾರಸ್ಸನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಬಗ್ಗೆ ಕೇಂದ್ರ ಒತ್ತು ನೀಡಲಿ ಎಂದು ಹೇಳಿದರು.

ಸಾಲ ಮರು ಪಾವತಿಸದಿರುವುದಕ್ಕೆ ಬ್ಯಾಂಕ್‍ಗಳ ಉನ್ನತ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡಿ, ಕಠಿಣ ಕ್ರಮ ಜರುಗಿಸಬೇಕು. ಎಫ್‍ಆರ್‍ಡಿಐ ಬಿಲ್ ವಾಪಾಸ್ ಪಡೆಯಬೇಕು. ಬ್ಯಾಂಕ್ ಬೋರ್ಡ್ ಬ್ಯೂರೋ ಮುಚ್ಚಬೇಕು. ಎನ್‍ಪಿಎ ಸಾಲ ಮರುಪಾವತಿಯಾಗದೇ ಆರ್ಥಿಕ ನಷ್ಟವನ್ನು ಬ್ಯಾಂಕ್ ಶುಲ್ಕ ಹೆಚ್ಚಿಸುವ ಮೂಲಕ ಸರಿದೂಗಿಸಲಿ ಎಂದು ಅವರು ಆಗ್ರಹಿಸಿದ ಅವರು, ಜಿಎಸ್‍ಟಿ ಹೆಸರಿನಲ್ಲಿ ಬ್ಯಾಂಕ್ ಸೇವಾ ಶುಲ್ಕ ಹೆಚ್ಚಿಸಬಾರದು. ನೋಟು ಅಮಾನ್ಯೀಕರಣದ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಜಾರಿಯಿಂದಾಗಿ ಬ್ಯಾಂಕ್‍ಗಳಿಗೆ ತಗುಲಿರುವ ವೆಚ್ಚವನ್ನು ಕೇಂದ್ರ ಸರ್ಕಾರ ಮರು ಪಾವತಿಸಲಿ. ನೋಟ್ ಬ್ಯಾನ್ ವೇಳೆ ಬ್ಯಾಂಕ್‍ಗಳ ನೌಕರರು, ಅಧಿಕಾರಿಗಳ ಬೇಡಿಕೆ ಈಡೇರಿಸಬೇಕು ಎಂದು ಅವರು ಮನವಿ ಮಾಡಿದರು.

ಎಐಬಿಓಸಿ ಮುಖಂಡ ಡಿ.ಎಸ್. ಹನುಮಂತಪ್ಪ ಮಾತನಾಡಿ, ಬ್ಯಾಂಕ್ ನೌಕರ ಮತ್ತು ಅಧಿಕಾರಿ ಪ್ರತಿನಿಧಿಗಳÀ ನಿರ್ದೇಶಕರನ್ನು ಕೇಂದ್ರ ಸರ್ಕಾರ ತಕ್ಷಣ ನೇಮಿಸಬೇಕು. ಸರ್ಕಾರಿ ನಿಯಮದಂತೆ ಅನುಕಂಪ ಆಧಾರಿತ ನೌಕರಿ ಯೋಜನೆ ಜಾರಿಗೊಳಿಸಲಿ. ಗ್ರಾಚ್ಯುಟಿ ಮೇಲಿನ ಮಿತಿ ತೆಗೆದು ಹಾಕಬೇಕು. ಗ್ರಾಚ್ಯುಟಿ ಮತ್ತು ರಜೆ ನಗದೀಕರಣ ಮೇಲೆ ತೆರಿಗೆ ವಿನಾಯಿತಿ ನೀಡಲಿ ಎಂದ ಅವರು, ಆರ್‍ಬಿಐ ಮತ್ತು ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಯೋಜನೆಗೆ ಸಮಾನವಾಗಿ ಬ್ಯಾಂಕ್ ನೌಕರರಿಗೂ ಪಿಂಚಣಿ ಸೌಲಭ್ಯ ನೀಡಬೇಕು. ಬ್ಯಾಂಕ್‍ಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ವೇದಿಕೆಯ ಈ ಎಲ್ಲಾ ಬೇಡಿಕೆ ಈಡೇರಿಸಲು ಒತ್ತಾಯಿಸಿ ಇಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆಯ ಮುಖಂಡರಾದ ಸುನಿಲ್ ಮ್ಯಾಗೇರಿ, ಎಂ.ಎಸ್. ವಾಗೀಶ, ಪಿ.ಆರ್. ಪುರುಷೋತ್ತಮ, ವಿ. ಶಂಭುಲಿಂಗಪ್ಪ, ದತ್ತಾತ್ರೇಯ ಮೇಲಗಿರಿ, ಜಿ. ರಂಗಸ್ವಾಮಿ, ಅಜಿತಕುಮಾರ ನ್ಯಾಮತಿ, ಗಿರಿರಾಜ, ದಿಳ್ಯಪ್ಪ, ಆರ್. ಶ್ರೀನಿವಾಸ, ಕೃಷ್ಣ ಚೈತನ್ಯ, ಕೆ. ವಿಶ್ವನಾಥ ಬಿಲ್ಲವ, ಕೃಷ್ಣಪ್ಪ, ಎಚ್.ಎಸ್. ತಿಪ್ಪೇಸ್ವಾಮಿ ಮತ್ತಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ನರೇಂದ್ರಕುಮಾರ, ಎನ್.ಎಚ್. ಮಂಜುನಾಥ, ಸುಜಯಾ ನಾಯಕ್, ಅನುರಾಧ ಮುತಾಲಿಕ್, ಕೆ. ಜಯಲಕ್ಷ್ಮಿ, ಜ್ಯೋತಿಲಕ್ಷ್ಮಿ, ಎಸ್.ಭಾರತಿ, ಸುರೇಶ ಚೌಹಾಣ್, ಆಂಜನೇಯ, ಎಲ್.ಕೆ. ನಾಯ್ಕ, ಎಂ.ಎಂ. ಸಿದ್ದಲಿಂಗಪ್ಪ, ವೀರಪ್ಪ, ಕೆ. ನಾಗರಾಜ, ಎಂ.ಎಂ. ಸಿದ್ದಲಿಂಗಯ್ಯ, ಕೆ.ಆರ್. ರವೀಂದ್ರ, ನಿವೃತ್ತರ ಸಂಘದ ವಿ. ನಂಜುಂಡೇಶ್ವರ, ಜಿ.ರಂಗಸ್ವಾಮಿ, ಎಚ್. ಸುಗೀರಪ್ಪ, ಜಿ.ಬಿ .ಶಿವಕುಮಾರ, ಎಚ್.ಸಿ. ವೇದಮೂರ್ತಿ  ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News