ತುಮಕೂರು: ಕೊನೆಗೂ ಬುಗುಡನಹಳ್ಳಿ ಕೆರೆಗೆ ಹರಿದ ಹೇಮಾವತಿ ನೀರು

Update: 2017-08-22 17:30 GMT

ತುಮಕೂರು, ಆ.22: ಹಲವು ದಿನಗಳಿಂದ ತುಮಕೂರು ನಗರದ ನಾಗರೀಕರು ನಿರೀಕ್ಷೆ ಮಾಡುತ್ತಿದ್ದ ಹೇಮಾವತಿ ನೀರಿಗೆ ಕೊನೆಗೂ ಬುಗುಡನಹಳ್ಳಿ ಕೆರೆಗೆ ಹರಿದಿದೆ.
ನಗರದ 3.5 ಲಕ್ಷ ಜನಸಂಖ್ಯೆಯ ದಾಹ ತೀರಿಸುವ ಬುಗುಡನಹಳ್ಳಿ ಕೆರೆಗೆ ಆ.13ರಂದು ನೀರು ಹರಿಯಬೇಕಿತ್ತು. ಆದರೆ ತುಮಕೂರು ಬ್ರಾಂಚ್ ಕೆನಾಲ್‍ನಲ್ಲಿ ಬಿರುಕು ಉಂಟಾಗಿ ನಾಲೆ ದುರಸ್ತಿ  ಮಾಡಲು ನೀರು ನಿಲ್ಲಿಸಿದ್ದರ ಪರಿಣಾಮ 9 ದಿನಗಳ ನಂತರ ಅಚಿದರೆ ಮಂಗಳವಾರ ಬುಗುಡನಹಳ್ಳಿ ಕೆರೆಗೆ ನೀರು ಹರಿದಿದೆ.

ಮಂಗಳವಾರ ಬೆಳಗಿನ ಜಾವ 3.30ರ ವೇಳೆಗೆ ಹೇಮಾವತಿ ನಾಲೆಯ 132ನೆ ಎಸ್ಕೇಪ್‍ನಿಂದ 150 ಕ್ಯೂಸೆಕ್ಸ್ ನೀರು ತುಮಕೂರಿನ ಬುಗುಡನಹಳ್ಳಿ ಕೆರೆಗೆ ಹರಿಯುತ್ತಿದೆ. ಅದೇ ರೀತಿ ನೀರು ಹರಿದಲ್ಲಿ ಮುಂದಿನ 15ರಿಂದ 20 ದಿನಗಳೊಳಗೆ ಬುಗುಡನಹಳ್ಳಿ ಕೆರೆ ಭರ್ತಿಯಾಗಲಿದೆ.

ತುಮಕೂರು ನಗರಕ್ಕೆ ಕುಡಿಯುವುದಕ್ಕಾಗಿ 1.135 ಟಿಎಂಸಿ ನೀರು ನಿಗದಿಪಡಿಸಿದ್ದು, ಬುಗುಡನಹಳ್ಳಿ ಕೆರೆ ಕೇವಲ 0.4ಟಿಎಂಸಿ ನೀರು ಮಾತ್ರ ಹಿಡಿಯಲಿದೆ ಹಾಗಾಗಿ ಬುಗುಡನಹಳ್ಳಿ ಕೆರೆ ಪಕ್ಕದಲ್ಲಿ ಇರುವ ಹೆಬ್ಬಾಕ ಕೆರೆ, ಸಿದ್ದಗಂಗಾ ಮಠದ ಪಕ್ಕದಲ್ಲಿರುವ ಮೈದಾಳ, ದೇವರಾಯಪಟ್ಟಣ ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ಮುಂದಿನ ಮೇ ವರೆಗೆ ತುಮಕೂರು ನಗರಕ್ಕೆ ನೀರು ಹರಿಸಬಹುದಾಗಿದೆ.

ಜಯಚಂದ್ರ ಭೇಟಿ:  ಹೇಮಾವತಿಯಿಂದ ಇಂದು ಬೆಳಗ್ಗೆ 3.30 ರಿಂದ ತುಮಕೂರಿನ ಬುಗಡನಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ವೀಕ್ಷಿಸಿದರು.

ಕುಡಿಯುವ ನೀರಿಗಾಗಿ ಮಾತ್ರ ಕೆರೆಗೆ ನೀರನ್ನು ನಾಲೆಯಿಂದ ಹರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ನೀರು ಬಳಕೆ ಯಾಗಬಾರದು.ನಾಲೆಯಿಂದ ಅಕ್ರಮವಾಗಿ ನೀರು ಪಡೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News