ಚಿಕ್ಕಬಳ್ಳಾಪುರ: ರೈತರ ಹಕ್ಕೊತ್ತಾಯಕ್ಕೆ ಆಗ್ರಹಿಸಿ ವಿವಿಧ ರೈತ ಸಂಘದಿಂದ ಧರಣಿ

Update: 2017-08-22 17:44 GMT

ಚಿಕ್ಕಬಳ್ಳಾಪುರ, ಆ.22: ರೈತಾಪಿ, ಕೃಷಿ ಕಾರ್ಮಿಕರ ಮತ್ತು ದಲಿತರ ಹಕ್ಕೊತ್ತಾಯಗಳನ್ನು ಈಡೇರಿಕೆಸಲು ಆಗ್ರಹಿಸಿ ಕೆಪಿಆರ್‍ಎಸ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಲಾಯಿತು.

 ನಗರದ ಶನೈಶ್ಚರಸ್ವಾಮಿ ದೇವಾಲಯದ ಎದುರು ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕೆಪಿಆರ್‍ಎಸ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘಟನೆಗಳ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಘೋಷಣೆಗಳೊಂದಿಗೆ ಬಿ.ಬಿ ರಸ್ತೆ ಮುಖಾಂತರ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ, ರಾಜ್ಯದಲ್ಲಿ ತಲೆದೂರಿರುವ ಸತತ ಬರದಿಂದ ರೈತರ ಪರಿಸ್ಥಿತಿ ಡೋಲಾಯಮಾನವಾಗಿದೆ. ಅಲ್ಲದೆ ರಾಜ್ಯ ಸರ್ಕಾರ, ಹವಾಮಾನ ಇಲಾಖೆಯ ವರದಿಯಂತೆ ರಾಜ್ಯದಲ್ಲಿ ಇದುವರೆಗೆ ಶೇ. 25ರಷ್ಟು ಮಳೆಯ ಕೊರತೆಯೊಂದಿಗೆ ಶೇ.60 ರಷ್ಟು ಬಿತ್ತನೆ ಆಗಿಲ್ಲ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕಿರುವ ಸರ್ಕಾರಗಳು ದೂಷಣೆಯಲ್ಲಿ ಕಾಲ ಕಳೆಯುವ ಮೂಲಕ ನುಣಿಚಿಕೊಳ್ಳುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ರೈತರ ರೈತರ ಬೆನ್ನಿಗೆ ಚೂರಿ ಹಾಕಿದ್ದು, ಚುನಾವಣಾ ಪೂರ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರು ನದಿಗಳ ಜೋಡಣೆ, ಡಾ. ಸ್ವಾಮಿನಾಥನ್ ವರದಿ ಅನುಷ್ಠಾನ ಸೇರಿದಂತೆ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ಮಾಡುವಂತೆ ಕೇಂದ್ರದಲ್ಲಿ ಮೊರೆಯಿಟ್ಟರೆ ದೇಶವು ಆರ್ಥಿಕವಾಗಿ ದಿವಾಳಿಯತ್ತ ಸಾಗುವುದು ಎಂದು ಹೇಳಿಕೊಳ್ಳುವ ಕೇಂದ್ರ ಸರ್ಕಾರವು, ಬೃಹತ್ ಉದ್ದಿಮೆದಾರರ ಸಾಲವನ್ನು ಕಟ್ಟದೆ ನಿಲ್ಲಿಸಿರುವ ಸಾಲ ಎಂದು 6.41 ಲಕ್ಷ ಕೋಟಿ ರೂ. ಘೋಷಿಸಿದೆ. ಅಲ್ಲದೆ ಉದ್ದಿಮೆದಾರಿಗೆ 3.5 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದೆ. ಆದರೆ ರೈತರ 2.80 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡದೇ ಜನ ಸಾಮಾನ್ಯರ ಮೇಲೆಯೇ ಜಿಎಸ್‍ಟಿ ತೆರಿಗೆ ಪ್ರಯೋಗ ಮಾಡಿದೆ ಎಂದು ಲೇವಡಿ ಮಾಡಿದರು.

ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ 10 ವರ್ಷಗಳು ಕಳೆದರೂ ಅಭಿವೃದ್ಧಿ ಎಂಬುದು ಕೇವಲ ಕೆಲ ಕಟ್ಟಡಗಳಿಗೆ ಸೀಮಿತವಾಗಿದೆ ಹೊರತು, ಅಧಿಕಾರ ವಿಕೇಂದ್ರಿಕರಣವೂ ಸಾಧ್ಯವಾಗದೇ, ಅಧಿಕಾರಿಗಳು ಕಟ್ಟಡಗಳಿಗೆ ಸೀಮಿತವಾಗಿದ್ದಾರೆ. ಇದರಿಂದ ಜನಸಾಮಾನ್ಯ ಕಷ್ಟಗಳು ಬಗೆಹರಿಯುತ್ತಿಲ್ಲ ಎಂದು ಕಿಡಿಕಾರಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯು ತೀರ ಹದಗೆಟ್ಟಿದ್ದು, ಮಹಿಳೆಯರ ಕಳ್ಳಸಾಗಾಣಿಕೆ ಸೇರಿದಂತೆ ಮತ್ತಿತರರ ಅಪರಾಧ ಕೃತ್ಯಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದು, ಇದರಿಂದ ಜಿಲ್ಲೆಯನ್ನಾಗಿಸಿ ಮೂಲ ಉದ್ದೇಶ ಇದುವರೆಗೂ ಈಡೇರಿಲ್ಲ ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ. ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ನಿರಂತರ ಬರ ಸೇರಿದಂತೆ ಬೆಲೆ ಕುಸಿತದಿಂದ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ನಷ್ಟ ಅನುಭವಿಸುತ್ತಿದ್ದು, ಇದರಿಂದ ಸಾಲ ತೀರಿಸಲಾಗದೇ ಆತ್ಮಹತ್ಯೆಯತ್ತ ರೈತ ಮುಖ ಮಾಡಿದ್ದಾರೆ. ಆದ್ದರಿಂದ ಈ ಕೂಡಲೇ ಸರ್ಕಾರಗಳು ಬೆಳೆಗಾಗಿ ರೈತರು ಮಾಡಿದ ಎಲ್ಲ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ  ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಕೆಪಿಆರ್‍ಎಸ್ ಜಿಲ್ಲಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಚೆನ್ನರಾಯಪ್ಪ, ರೈತ ಸಂಘದ ಯಾಕೂಬ್‍ ಶರೀಫ್, ನಾರಾಯಣಮ್ಮ, ದಲಿತ ಸಂಘಟನೆಯ ಸಿ.ಜಿ. ಗಂಗಪ್ಪ, ಬಿ.ವಿ. ಆನಂದ್, ಮುನೆಯ್ಯ ಮತ್ತಿತರು ಇದ್ದರು.     

 ಬೇಡಿಕೆಗಳು: ರೈತರ ಸಂಪೂರ್ಣ ಸಾಲ ಮನ್ನ, ಬಗರ್‍ಹುಕುಂ ಸಾಗುವಳಿ ಚೀಟಿ ವಿತರಣೆ, ನಿವೇಶನ ವಿತರಣೆ, ಡಾ.ಸ್ವಾಮಿನಾಥನ್ ವರದಿ ಅನುಷ್ಠಾನ, ಬೆಲೆಗಳಿಗೆ ವೈಜ್ಞಾನಿಕ ಬೆಲೆ ನೀಡುವುದು, ಉದ್ಯೋಗ ಖಾತ್ರಿಯಲ್ಲೂ ಕನಿಷ್ಠ ವೇತನ ನೀಡುವುದು, ಡಾ. ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಧರಣಿ ನಿರತರರು ಆಗ್ರಹಿಸಿದರು.
                                                                                                                      
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News