ಮಂಡ್ಯ: ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Update: 2017-08-22 18:19 GMT

ಮಂಡ್ಯ, ಆ.22: ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಗಾರರ ಸಂಘ, ಕರ್ನಾಟಕ ಪ್ರಾಂತ ರೈತಸಂಘ ಹಾಗು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಬರಗಾಲ ಮತ್ತು ನಿರಂತರ ಬೆಲೆ ಕುಸಿತದಿಂದಾಗಿ ನಷ್ಟ ಹೊಂದಿದ ರೈತರ ಎಲ್ಲ ರೀತಿಯ ಸಾಲಮನ್ನಾ ಸೇರಿದಂತೆ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ, ದಲಿತ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಬ್ಸಿಡಿ ಸಾಲಗಳನ್ನು ಮನ್ನಾಮಾಡಬೇಕು ಎಂದು  ಒತ್ತಾಯಿಸಿದರು.

ರೈತರ ಎಲ್ಲ ಬೆಳೆಗಳಿಗೆ ಡಾ.ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಬೆಳೆ ಬೆಳೆಯುವ ಒಟ್ಟು ಖರ್ಚು ಮತ್ತು ಅರ್ಧದಷ್ಟು ಲಾಭಾಂಶ ಸೇರಿದಂತೆ ಬೆಂಬಲ ಬೆಲೆ ಖಾತರಿ ನೀಡಲು ಶಾಸನ ರೂಪಿಸಬೇಕು.  ಮಾರುಕಟ್ಟೆಯಲ್ಲಿ ದರಗಳು ಕುಸಿಯದಂತೆ ತಡೆಯಲು ಹಾಗು ಖರೀದಿಸಲು ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಉದ್ಯೋಗ ಖಾತ್ರಿ ಕೂಲಿಯನ್ನು ಕನಿಷ್ಠ ದಿನಕ್ಕೆ 600 ರೂ.ಗೆ ಹೆಚ್ಚಿಸಿ ವರ್ಷಕ್ಕೆ 200 ದಿನಗಳಿಗೆ ಕೆಲಸ  ನೀಡಬೇಕು. ನಗರ ಪ್ರದೇಶದ ಬಡವರಿಗೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು. ಭ್ರಷ್ಟಾಚಾರ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಬೆಳೆ ವಿಮೆ ಯೋಜನೆಯನ್ನು ರೈತ ಸ್ನೇಹಿಯಾಗಿ ತಕ್ಷಣ ಪರಿವರ್ತನೆ ಮಾಡಲು ಅಗತ್ಯ ತಿದ್ದುಪಡಿ ತರಬೇಕು. ಎಲ್ಲ ರೈತರಿಗೆ ಬೆಳೆ ವಿಮೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇತರೆ ಹಕ್ಕೊತ್ತಾಯಗಳು: ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧ ನಿಯಮಾವಳಿಗಳ ಗೆಜೆಟ್ ನೋಟಿಫಿಕೇಷನನ್ನು ತಕ್ಷಣವೇ ವಾಪಸ್ ಪಡೆಯಬೇಕು. ಗೋರಕ್ಷಣೆಯ ಹೆಸರಿನಲ್ಲಿ ದಾಳಿ ನಡೆಸುವ ಗೋರಕ್ಷಕರ ಕ್ರಿಮಿನಲ್ ಗ್ಯಾಂಗನ್ನು ನಿಷೇಧಿಸಬೇಕು. ರಾಜ್ಯವನ್ನು ಬರಗಾಲ ಪೀಡಿತ ಎಂದು ಘೋಷಿಸಿ ರೈತರ ಜಮೀನಿನ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದರು. 

ಕಂದಾಯ  ಇಲಾಖೆಯಿಂದ ನೀಡುತ್ತಿರುವ  ಸಬ್ಸಿಡಿ ಬಾಕಿಯನ್ನು ಇರುವ ಎಲ್ಲ ರೈತರಿಗೂ ನೀಡಬೇಕು. ರೇಷನ್ ಕಡಿತಗೊಳಿಸಿರುವ ರೈತ ಕುಟುಂಬಗಳಿಗೆ ತಕ್ಷಣ ರೇಷನ್ ಕಾರ್ಡ್ ಮತ್ತು ಪಡಿತರ ವಿತರಿಸಬೇಕು. ವಸತಿ ಹಾಗೂ ನಿವೇಶನ ರಹಿತರಿಗೆ ತಕ್ಷಣ ವಸತಿ, ನಿವೇಶನ ಒದಗಿಸಬೇಕು. ರೈತರು, ಕೂಲಿಗಾರರು ಮತ್ತು ಕಸುಬುದಾರರಿಗೆ ಕನಿಷ್ಠ ಮಾಸಿಕ 5 ಸಾವಿರ ರೂ. ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು

ರೈತಸಂಘದ ಕೋಣಸಾಲೆ ನರಸರಾಜು, ಶಂಭೂನಹಳ್ಳಿ ಸುರೇಶ್, ಕೂಲಿಕಾರರ ಸಂಘದ ಎಂ.ಪುಟ್ಟಮಾದು, ಕರ್ನಾಟಕ ಪ್ರಾಂತ ರೈತಸಂಘದ ಟಿ.ಎಲ್.ಕೃಷ್ಣೇಗೌಡ, ಟಿ.ಯಶವಂತ್, ಎನ್.ಎಲ್.ಭರತ್‍ರಾಜ್, ರಾಜಣ್ಣ, ಶಿವಮಲ್ಲು, ಬಸವರಾಜು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News