ಜನತೆಯ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಶಿಕ್ಷೆ ಆಗಬೇಕು: ಸಚಿವ ಕಾಗೋಡು ತಿಮ್ಮಪ್ಪ

Update: 2017-08-22 18:28 GMT

ಶಿಕಾರಿಪುರ, ಆ.22: ಜನತೆಯ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಶಿಕ್ಷೆ ಆಗಬೇಕು ಆ ಕಾರ್ಯ ಶಿಕಾರಿಪುರ ಕ್ಷೇತ್ರದಿಂದಲೇ ಆರಂಭವಾಗಬೇಕು ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಮಂಗಳವಾರ ಪಟ್ಟಣದ ಗುರುಭವನದಲ್ಲಿ ನಡೆದ ಭೂತ್ ಮಟ್ಟದ ಕಾಂಗ್ರೆಸ್ ಕಾರ್ಯರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಾರ್ಯಕರ್ತರು ಹೊಸ ಇಚ್ಛಾ ಶಕ್ತಿಯಿಂದ ಪಕ್ಷವನ್ನು ಭೂತ್‌ಮಟ್ಟದಲ್ಲಿ ಕಟ್ಟಲು  ಸಿದ್ಧರಾಗಬೇಕಾಗಿದೆ. ಪಕ್ಷ ಹಿಂದುಳಿದವರಿಗೆ,ಅಲ್ಪಸಂಖ್ಯಾತರಿಗೆ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟಿದ್ದು ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರದ ಮೂಲಕ ಭೂ ಒಡೆತನವನ್ನು ಕಾಂಗ್ರೆಸ್ ಕಲ್ಪಿಸಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ಸಾಧನೆಯನ್ನು ತಮ್ಮ ಸಾಧನೆ ಎಂದು ಅಪ್ಪಮಕ್ಕಳು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಸಂಸದ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆ ಹಾನಿಗೆ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆಗೊಳಿಸಲಾಗುತ್ತಿದ್ದು, ದೇಶದಲ್ಲಿಯೇ ಇಂತಹ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಶಾಸಕರು ಸಭೆಗೆ ಹಾಜರಾಗದಿದ್ದಲ್ಲಿ ಬಗರ್‌ ಹುಕುಂ ಸಭೆ ನಡೆಸಿ ಜನತೆಗೆ ನ್ಯಾಯ ದೊರಕಿಸಲು ಸೂಚಿಸಿ ಅಂದಾಜು ಜಿಲ್ಲೆಯಲ್ಲಿ 3.5 ಲಕ್ಷ ಅರ್ಜಿ ಬಾಕಿಯುಳಿದಿದ್ದು ಕೂಡಲೇ ಇತ್ಯರ್ಥಪಡಿಸಬೇಕಾಗಿದೆ ಎಂದು ತಿಳಿಸಿದರು.

ಗೋಮಾಳ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ವಿತರಿಸಲು ಸರ್ಕಾರ ತೀರ್ಮಾನಿಸಿದ್ದು ಉಚ್ಚನ್ಯಾಯಾಲಯದಲ್ಲಿನ ತಡೆಯಾಜ್ಞೆಯಿಂದಾಗಿ ಪ್ರಕ್ರಿಯೆ ವಿಳಂಭವಾಗಿದೆ ಎಂದ ಅವರು, ಪ್ರತಿ ಗ್ರಾಮದಲ್ಲಿ ಸರ್ವ ಸಮುದಾಯದ ಪುರುಷ ಮಹಿಳೆಯರಿಗೆ ಸರ್ಕಾರದ ಯೋಜನೆಯನ್ನು ತಲುಪಿಸಿ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಬೇಕಾಗಿದೆ.ಈ ಮೂಲಕ ಪಕ್ಷವನ್ನು ಭೂತ್ ಮಟ್ಟದಲ್ಲಿ ಸಂಘಟಿಸುವಂತೆ ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದಲ್ಲಿ ಪುನಃ ಪಕ್ಷ ಅಧಿಕಾರಗಳಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಾಗಿದೆ, ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯವನ್ನು ಬಿಜೆಪಿ ವಿಸ್ತಾರಕ ಕಾರ್ಯಕ್ರಮದ ಮೂಲಕ ಜನತೆಯ ಮನೆಮನೆಗೆ ತೆರಳಿ ತಪ್ಪುಸಂದೇಶವನ್ನು ನೀಡುತ್ತಿದ್ದು ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದರು.

ಜಿಲ್ಲಾಧ್ಯಕ್ಷ ತೀ.ನಾ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ರೈತರ ಸಾಲಮನ್ನಾಗೊಳಿಸಿದಲ್ಲಿ ಕೇಂದ್ರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾಗೊಳಿಸುವುದಾಗಿ ಯಡಿಯೂರಪ್ಪ ಸವಾಲು ಹಾಕಿದ್ದು ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ 4.5 ಲಕ್ಷ ಕೋಟಿ ರೂ. ಸಾಲಮನ್ನಾಗೊಳಿಸಿದ್ದು ರೈತರ ಸಾಲ ಮನ್ನಾಕ್ಕೆ ಮಾತ್ರ ಹಿಂದೇಟು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ, ಜಿಪಂ ಸದಸ್ಯ ನರಸಿಂಗನಾಯ್ಕ, ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್, ಎಪಿಎಂಸಿ ನಿರ್ದೇಶಕ ನಗರದ ರವಿಕಿರಣ, ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್, ಮುಖಂಡ ನಗರದ ಮಹಾದೇವಪ್ಪ, ಹಳ್ಳೂರು ಪರಮೇಶ್ವರಪ್ಪ, ಭಂಡಾರಿ ಮಾಲತೇಶ ಮತ್ತಿತರರು ಉಪಸ್ಥಿತರಿದ್ದರು.
 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News