×
Ad

ಸಾಗರ: ಶಬ್ದಮಾಲಿನ್ಯ ತಡೆಗಟ್ಟಲು ಕರವೇ ಮನವಿ

Update: 2017-08-23 19:00 IST

ಸಾಗರ, ಆ. 23: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಅತಿವೇಗ ಹಾಗೂ ಅತಿಯಾದ ಶಬ್ದಗಳಿಂದ ಕೂಡಿದ ಮೋಟಾರ್ ಸೈಕಲ್‍ಗಳ ಸಂಚಾರದಿಂದ ಉಂಟಾಗುತ್ತಿರುವ ಶಬ್ದಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯಿಂದ ಅಗತ್ಯಕ್ರಮ ಜರುಗಿಸುವಂತೆ ಒತ್ತಾಯಿಸಿ ಬುಧವಾರ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಡಿಷನಲ್ ಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಸಾಗರ ನಗರದಲ್ಲಿ ದಿನದಿಂದ ದಿನಕ್ಕೆ ವಿಪರೀತ ಹಾಗೂ ಕರ್ಕಶ ಶಬ್ದ ಮಾಡುವ ಮೋಟಾರ್ ಸೈಕಲ್, ಬುಲೇಟ್ ಸಂಖ್ಯೆ ಹೆಚ್ಚುತ್ತಿದೆ. ಜನರ ಮಾನಸಿಕ ಸ್ವಾಸ್ಥ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುವ ಬುಲೇಟ್ ಬೈಕ್‍ನಿಂದ ರಸ್ತೆಯಲ್ಲಿ ಸಂಚರಿಸುವ ಹಾಗೂ ಮನೆಯೊಳಗೆ ಇರುವ ಜನರು ಭಯಬೀತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. 

ಇದರ ಜೊತೆಗೆ ಬೈಕ್‍ನಲ್ಲಿ ಮೂರು ಜನರು ಕುಳಿತು ಓಡಾಡುವವರ ಸಂಖ್ಯೆ ಸಹ ಹೆಚ್ಚುತ್ತಿದೆ. ಹೆಚ್ಚಾಗಿ ಶಾಲಾಕಾಲೇಜು ಬಿಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಬುಲೇಟ್ ಬೈಕ್ ಮೂಲಕ ಹಿಂಭಾಗದಲ್ಲಿ ಜೋರಾದ ಶಬ್ದ ಮಾಡಿಕೊಳ್ಳುತ್ತಾ ಬರುತ್ತಾರೆ. ಶಾಲಾಕಾಲೇಜು ವಿದ್ಯಾರ್ಥಿಗಳು ನೆಮ್ಮದಿಯಿಂದ ರಸ್ತೆಯಲ್ಲಿ ತಿರುಗಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಪರೀತ ಶಬ್ದಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿರುವ ಬೈಕ್ ಸವಾರರ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸುವ ಬಗ್ಗೆ ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ವೇದಿಕೆಯ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಶ್ರೀಧರ, ಕಾರ್ಯಾಧ್ಯಕ್ಷ ಪದ್ಮನಾಭ, ನಗರ ಘಟಕದ ಸಂತೋಷ ಕೆ.ಜಿ., ರವಿಶೆಟ್ಟಿ, ಮಂಜುನಾಥ್, ಜಯಮ್ಮ, ಆಶಾ ನಾಗರಾಜ್, ಲೋಬೋ, ಪರಶುರಾಮ್, ದಿನೇಶ್, ಅನಂತ ಹೆಗಡೆ, ಅಸ್ಪಾಕ್, ಮಣಿ, ಅಜಿತ್ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News