ಕಬ್ಬಿನಮನೆ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮನವಿ
ಸಾಗರ, ಆ. 23: ತಾಲೂಕಿನ ಸಂಪಿಗೆಮನೆ ಮತ್ತು ಕಬ್ಬಿನಮನೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಬುಧವಾರ ಪ್ರಜಾ ವಿಮೋಚನಾ ಸೇನೆ ಮಾನವತವಾದ ಸಂಸ್ಥೆ ವತಿಯಿಂದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಜಿಲ್ಲಾ ಸಂಸ್ಥಾಪಕ ಅಧ್ಯಕ್ಷ ನಾಗರಾಜಸ್ವಾಮಿ, ಮೆಸ್ಕಾಂ ಅಧಿಕಾರಿ ಇಬ್ರಾಹಿಂ ಎಂಬುವವರು ಟ್ರಾನ್ಸ್‍ಫಾರ್ಮರ್ ಅಳವಡಿಸಿ ಎಂದು ಹೇಳಿದರೆ ದಲಿತ ಮಹಿಳೆಯನ್ನು ಏಕವಚನದಲ್ಲಿ ಬೈದು, ಬೆದರಿಕೆ ಹಾಕಿದ್ದಾರೆ. ಮೆಸ್ಕಾಂನಿಂದ ಸಂಪಿಗೆಮನೆ ಮತ್ತು ಕಬ್ಬಿನಮನೆ ಗ್ರಾಮದ ವಿದ್ಯುತ್ ಸಮಸ್ಯೆ ನಿವಾರಣೆ ಮಾಡಲು ಟ್ರಾನ್ಸ್‍ಫಾರ್ಮರ್ ಮಂಜೂರಾಗಿದೆ. ಆದರೆ ಅಧಿಕಾರಿಗಳು ಯಾವುದೋ ಆಮೀಷಕ್ಕೆ ಒಳಗಾಗಿ ಈ ಗ್ರಾಮಕ್ಕೆ ಮಂಜೂರಾದ ಟ್ರಾನ್ಸ್‍ಫಾರ್ಮನ್ನು ಪಕ್ಕದ ಬ್ರಾಹ್ಮಣಬೇದೂರು ಗ್ರಾಮಕ್ಕೆ ವರ್ಗಾಯಿಸುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಪಿಗೆಮನೆ ಮತ್ತು ಕಬ್ಬಿನಮನೆ ಗ್ರಾಮದಲ್ಲಿ ಸುಮಾರು 26 ಕುಟುಂಬಗಳಿದ್ದು, ಬಹುತೇಕ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ್ದಾಗಿದೆ. ಕಳೆದ ಅನೇಕ ವರ್ಷಗಳಿಂದ ಗ್ರಾಮಸ್ಥರು ಮಾಡಿಕೊಂಡ ಮನವಿ ಮೇರೆಗೆ ಇದೀಗ ಟ್ರಾನ್ಸ್‍ಫಾರ್ಮರ್ ಮಂಜೂರಾಗಿತ್ತು. ಆದರೆ ಅದನ್ನು ಗ್ರಾಮಸ್ಥರ ವಿರೋಧದ ನಡುವೆಯೂ ರಾಜಕೀಯ ಹಿತಾಸಕ್ತಿಗೆ ಒಳಗಾಗಿ ಮೆಸ್ಕಾಂ ಅಧಿಕಾರಿ ಇಬ್ರಾಹಿಂ ಎಂಬುವವರು ಪಕ್ಕದ ಗ್ರಾಮದಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಟ್ರಾನ್ಸ್‍ಫಾರ್ಮರ್ ಬೇರೆ ಕಡೆ ಏಕೆ ವರ್ಗಾಯಿಸುತ್ತೀರಿ, ನಮ್ಮ ಗ್ರಾಮಕ್ಕೆ ಮಂಜೂರಾಗಿರುವುದು ಎಂದು ಗ್ರಾಮಸ್ಥರು ಅಧಿಕಾರಿಯನ್ನು ಪ್ರಶ್ನಿಸಿದರೆ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೆ ಸಂಪಿಗೆಮನೆ ಮತ್ತು ಕಬ್ಬಿನಮನೆ ಗ್ರಾಮಕ್ಕೆ ಮಂಜೂರಾಗಿರುವ ಟ್ರಾನ್ಸ್‍ಫಾರ್ಮರನ್ನು ಅಲ್ಲಿಯೆ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರ ಜೊತೆ ಏಕವಚನದಲ್ಲಿ ಮಾತನಾಡಿ, ಬೆದರಿಕೆ ಹಾಕಿರುವ ಮೆಸ್ಕಾಂ ಅಧಿಕಾರಿ ಇಬ್ರಾಹಿಂ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇನ್ನಷ್ಟು ಉಗ್ರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಈರೇಶಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಎಲ್.ಜಿ., ಖಜಾಂಚಿ ಶೇಟು, ತಾಲ್ಲೂಕು ಅಧ್ಯಕ್ಷ ಬಂಗಾರಪ್ಪ, ಜಂಟಿ ಕಾರ್ಯದರ್ಶಿ ರಮೇಶ್ ದಿಗಟೆಕೊಪ್ಪ, ಹುಚ್ಚಪ್ಪ ಗಾಳಿಪುರ. ಗ್ರಾಮಸ್ಥರಾದ ಬಂಗಾರಪ್ಪ, ಸುಮಿತ್ರ, ಗೌರಮ್ಮ, ಗಂಗಾಧರ, ಚಂದ್ರು, ಮಾಧವ ಇನ್ನಿತರರು ಹಾಜರಿದ್ದರು.