×
Ad

ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುತ್ತಿದ್ದಾರೆ: ಕರುಣಾಕರ್

Update: 2017-08-23 19:24 IST

 ಸೊರಬ, ಆ,23: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಜನಪರ ಕೆಲಸಗಳಿಗಿಂತಲೂ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವ ಕೆಲಸವೇ ಪ್ರಧಾನವಾಗಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಗೆ ಕಚೇರಿಯಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರದ ನೆಪದಲ್ಲಿ ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡುತ್ತಿದೆ ಎಂದು ಖಂಡಿಸಿ ಮನವಿ ಸಲ್ಲಿಸಿ ಮಾತನಾಡಿದರು.

ಈ ಹಿಂದೆ ಯುಪಿಎ ಸರ್ಕಾರದ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿ ಜನರಿಗೆ ಮಂಕುಬೂದಿ ಎರಚಿದೆ. ಗರಿಷ್ಠ ಮುಖಬೆಲೆಯ 1000, 500ರ ನೋಟ್ ಬ್ಯಾನ್ ಮಾಡುವ ಮೂಲಕ ಜನರ ನಿತ್ಯ ಬದುಕನ್ನು ದುಸ್ತರಗೊಳಿಸಿದೆ. ನೋಟ್ ಬ್ಯಾನ್ ಆಗಿ 9 ತಿಂಗಳು ಕಳೆದರೂ ಜನ ಹಣಕ್ಕಾಗಿ ಎಟಿಎಂ ಅಲೆಯುವುದು ತಪ್ಪಿಲ್ಲ, ಜನಧನ್ ಖಾತೆ ತೆರೆದಿದ್ದರೂ ಮತ್ತೊಂದು ಕಡೆ ಮಿನಿಮಮ್  ಬ್ಯಾಲೆನ್ಸ್ ಕನಿಷ್ಠ 3 ಸಾವಿರ ಇರಬೇಕೆಂದು ಹೇಳೀರುವುದರಿಂದ ಜನತೆ ಬ್ಯಾಂಕ್ ವ್ಯವಹಾರವೆ ಬೇಡ ಎನ್ನುವ ಸ್ಥಿತಿಗೆ ಬಂದಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಿದ್ದರು. ಅದೇ ರೀತಿ ಗಣಿ ಹಗರಣದಲ್ಲಿ ಗಾಲಿ ಜನಾರ್ಧನರೆಡ್ಡಿ, ಇನ್ನೋರ್ವ ನಾಯಕ ಕೆ.ಎಸ್.ಈಶ್ವರಪ್ಪ ಇವರ ಮನೆ ಮೇಲೂ ದಾಳಿ ನಡೆದಿತ್ತು. ಆದರೆ, ಅವರೆನ್ನೆಲ್ಲ ಭ್ರಷ್ಟರೆಂದು ಒಪ್ಪಿಕೊಳ್ಳದ ಬಿಜೆಪಿಗರು ಈಗ ಕಾಂಗ್ರೆಸ್ ಸಚಿವರ ನಿವಾಸದ ಮೇಲೆ ಐಟಿ ದಾಳಿಯಾದ ಕೂಡಲೇ ಅವರ ರಾಜಿನಾಮೆ ಕೇಳಲು ಯಾವ ನೈತಿಕ ಅಧಿಕಾರವಿದೆ ಎಂದು ಪ್ರಶ್ನಿಸಿದರು.

ಒಂದೇ ಉದ್ಧೇಶಕ್ಕಾಗಿ ಕಾಂಗ್ರೇಸ್ ನಾಯಕರ ವಿರುದ್ಧ ಪ್ರತಿಭಟನೆ ನಡೆಸುವುದು, ಅವಹೇಳನಕಾರಿಯಾಗಿ ಮಾತನಾಡುವುದನ್ನು, ಪ್ರತಿಭಟನೆ ನಡೆಸುವುದನ್ನು ಬಿಜೆಪಿಗರು ಕೈಬಿಡಬೇಕು. ಇಲ್ಲವಾದಲ್ಲಿ ಬಿಜೆಪಿ ವಿರುದ್ದ ಕಾಂಗ್ರೇಸ್ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಿವಕುಮಾರ ಬಿಳವಗೋಡು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಬಿಬುಲ್ಲ ಆನವಟ್ಟಿ, ಎನ್‍ಎಸ್‍ಯುಐ ಅಧ್ಯಕ್ಷ ಶಶಿಕುಮಾರ್ ಪ್ರಮುಖರಾದ ಗೋಪಾಲ್, ಚಿದಾನಂದ, ವಿನೋದ್, ಪರಶುರಾಮ್, ಅಂಬರೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News