×
Ad

ದೇಶದ ಗಡಿ ಕಾಯುವ ಯೋಧರು ನಿಜವಾದ ಹೀರೋಗಳು: ಎಸ್ ಐ ಕೆ.ವಿ.ಕೃಷ್ಣಪ್ಪ

Update: 2017-08-23 19:41 IST

ಗುಂಡ್ಲುಪೇಟೆ, ಆ. 23: ಸಮಾಜದಲ್ಲಿ ಚಿತ್ರನಟರು ಹಾಗೂ ಕ್ರಿಕೆಟ್ ಆಟಗಾರರನ್ನು ಸ್ಟಾರ್‍ಗಳೆಂದು ನೋಡಲಾಗುತ್ತಿದ್ದರೂ ದೇಶದ ಗಡಿಯನ್ನು ಕಾಯುವ ಯೋಧರು ಮಾತ್ರ ನಿಜವಾದ ಹೀರೋಗಳು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಕೆ.ವಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಅಮೇರಿಕಾದಲ್ಲಿ ನಡೆದ ಬಾಕ್ಸಿಂಗ್ ಸ್ಪರ್ದೆಯಲ್ಲಿ ಚಿನ್ನದ ಪದಕಗಳಿಸಿದ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಬಿಎಸ್‍ಎಫ್ ಯೋಧ ಶಿವಶಂಕರಪ್ಪನವರು ಸ್ವಗ್ರಾಮಕ್ಕೆ ಆಗಮಿಸಿದ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಮಾರ್ಗದರ್ಶನ ಹಾಗೂ ತರಭೇತಿಗಳೂ ಇಲ್ಲದೆಯೇ ನಿರಂತರ ಸಾಧನೆಯಿಂದ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಜಯಿಸಿ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಯೋಧನ ಸಾಧನೆ ಇತರರಿಗೆ ಮಾರ್ಗದರ್ಶನವಾಗಲಿದೆ. ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರ ಪರಿಶ್ರಮದಿಂದ ಸಮಾಜವು ನೆಮ್ಮದಿಯಾಗಿರಲು ಸಾಧ್ಯವಾಗಿದೆ. ಆದ್ದರಿಂದ ಯೋಧರ ಕುಟುಂಬಗಳಿಗೆ ಯಾವುದೇ ರೀತಿಯಲ್ಲಾದರೂ ನೆರವು ನೀಡುವ ಮೂಲಕ ತಮ್ಮ ಕೃತಜ್ಞತೆ ತೋರಿಸಬೇಕು ಎಂದರು.

ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್ ಮಾತನಾಡಿ ಯಾವುದೇ ಬೆಂಬಲವಿಲ್ಲದೆಯೇ ವಿಶ್ವಮಟ್ಟದಲ್ಲಿ ತಮ್ಮ ಸ್ವಸಾಧನೆಯಿಂದ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಿ ಹೆಸರುಗಳಿಸಿದ ತಾಲೂಕಿನ ಗ್ರಾಮೀಣ ಯೋಧರ ಸಾಧನೆ ಅಭಿನಂದನಾರ್ಹ. ಇವರು ಇನ್ನೂ ಹೆಚ್ಚಿನ ಸಾಧನೆಮಾಡಲಿ ಎಂದು ಹಾರೈಸಿದರು.

ಯೋಧ ಶಿವಶಂಕರಪ್ಪ ಮಾತನಾಡಿ, ಶಾಲಾಕಾಲೇಜು ದಿನಗಳಲ್ಲಿ ತಮಗೆ ಯಾವುದೇ ರೀತಿಯ ಪೆÇ್ರೀತ್ಸಾಹ ದೊರಕಿರಲಿಲ್ಲ. ಈವರೆಗೆ ತಮ್ಮನ್ನು ಯಾರೂ ಗುರುತಿಸಿ ಗೌರವಿಸಿಲ್ಲ. ಸೇವೆಗೆ ಸೇರಿದ ನಂತರ ಬಾಕ್ಸಿಂಗ್ ನಲ್ಲಿ ತಮಗಿದ್ದ ಆಸಕ್ತಿಯನ್ನು ಗಮನಿಸಿದ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ತಮ್ಮ ತಂದೆ ತಾಯಿಯರ ಆಶೀರ್ವಾದ ಹಾಗೂ ಅಧಿಕಾರಿಗಳ ಪ್ರೊತ್ಸಾಹದಿಂದ ಪ್ರತಿ ವರ್ಷವೂ ತಾವು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದ್ದು ಚಿನ್ನದಪದಕ ಗಳಿಸಲು ಸಾಧ್ಯವಾಯಿತು. ಮುಂದೆಯೂ ಅವಕಾಶ ಸಿಕ್ಕಿದರೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಈಗಿನಿಂದಲೇ ಸಿದ್ದತೆ ನಡೆಸುತ್ತಿರುವುದಾಗಿ ಹೇಳಿದರು.

ಇದಕ್ಕೂ ಮೊದಲು ಮೈಸೂರಿನಿಂದ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪಟ್ಟಣದ ಬಸ್ ನಿಲ್ದಾಣಕ್ಕೆ ಆಗಮಿಸಿದ ಯೋಧನನ್ನು ಸಾರಿಗೆ ಘಟಕದ ವ್ಯವಸ್ಥಾಪಕ ಎಂ.ಎಸ್.ಜಯಕುಮಾರ್ ಹಾರಹಾಕುವ ಮೂಲಕ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷರ ವಾಹನದಲ್ಲಿ ಅವರನ್ನು ಕಚೇರಿಗೆ ಕರೆದೊಯ್ದು ಸನ್ಮಾನಿಸಲಾಯಿತು. ಯೋಧನಿಗೆ ಸನ್ಮಾನ ಮಾಡುತ್ತಿರುವ ವಿಷಯ ತಿಳಿದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಮೊಬೈಲುಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನಂತರ ಶಿವಶಂಕರ್ ಹಾಗೂ ಅವರ ತಂದೆ ಮಹದೇವಪ್ಪ ಅವರನ್ನು ತಾಪಂ ಅಧ್ಯಕ್ಷರ ವಾಹನದಲ್ಲಿ ಸ್ವಗ್ರಾಮ ಹೊನ್ನೇಗೌಡನಹಳ್ಳಿಗೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News