×
Ad

ವಿದ್ಯಾರ್ಥಿಗಳು ಸನ್ಮಾರ್ಗದ ಹಾದಿಯಲ್ಲಿ ಸಾಗಬೇಕು: ನ್ಯಾ. ಬಿ.ಎಲ್. ಜಿನರಾಲ್ಕರ್

Update: 2017-08-23 19:44 IST

ದಾವಣಗೆರೆ, ಆ.23: ವಿದ್ಯಾರ್ಥಿಗಳು ಜಾಗೃತಿಯಿಂದ ಸನ್ಮಾರ್ಗದ ಹಾದಿಯಲ್ಲಿ ಸಾಗಿದಾಗ ಬದುಕು ಸುಂದರವಾಗುತ್ತದೆ ಎಂದು ನ್ಯಾಯಾಧೀಶ ಬಿ.ಎಲ್. ಜಿನರಾಲ್ಕರ್ ಕಿವಿಮಾತು ಹೇಳಿದರು.

ಇಲ್ಲಿನ ಮಿಲ್ಲತ್ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾನವ ಹಕ್ಕುಗಳ ವೇದಿಕೆ, ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಕ್ಷಣ ಮಾತ್ರದ ಸುಖದ ಹಿಂದೆ ಬಿದ್ದು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಜಾಗೃತೆಯಿಂದ ಕಟ್ಟಿಕೊಳ್ಳಬೇಕು. ಮನುಷ್ಯ ಆಚಾರ, ವಿಚಾರ, ನಡೆ ನುಡಿ ಶುದ್ಧವಾಗಿಟ್ಟುಕೊಂಡು ಮುನ್ನಡೆದಲ್ಲಿ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಬಹುದು. ಸಮಾಜದಲ್ಲಿ ತಾವು ಬೆಳೆಯುವುದರ ಜೊತೆಗೆ ತಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಸ್ವಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇನ್ನೊಬ್ಬರಿಗೆ ಕೆಡುಕನ್ನೇ ಭಯಸಲಾಗುತ್ತಿದೆ. ಇದು ಬದಲಾಗಬೇಕು. ಎಲ್ಲರು ಒಂದೇ ಎಂಬ ಭಾವನೆಯಿಂದ ನಡೆದಾಗ ಮಾತ್ರ ಆನ್ಯೋನ್ಯವಾಗಿರಲು ಸಾಧ್ಯ ಎಂದ ಅವರು, ಪ್ರಸ್ತುತ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನಲ್ಲಿಯೇ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ  ಆಸಿಡ್ ದಾಳಿಯಂತಹ ಕೃತ್ಯಗಳಿಗೆ ಸಾಕಷ್ಟು ಒಳಗಾಗುತ್ತಿದ್ದು, ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಅಂತಹವರನ್ನು ಮುಖ್ಯವಾಹಿನಿಗೆ ಕರೆ ತಂದು ಧೈರ್ಯ ತುಂಬಿ ಜೀವನಕ್ಕೆ ಸ್ಪೂರ್ತಿ ನೀಡುವ ಮೂಲಕ ಕಾನೂನು ಅರಿತು ಪಾಲನೆ ನೀಡಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಲೋಕೆರೆ ಸಿದ್ದಪ್ಪ ಮಾತನಾಡಿ, ಮನುಷ್ಯ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಕಾನೂನು ಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ. ಮಕ್ಕಳು ಬಾಲ್ಯ ವ್ಯವಸ್ಥೆಯಲ್ಲಿಯೇ ವಾಹನ ಚಾಲನೆ ಮಾಡುವುದು ಕಾನೂನು ರೀತಿಯ ಅಪರಾಧವಾಗಿದ್ದು, ಇದರಿಂದ ಪೋಷಕರು ಸಹ ಕಷ್ಟಗಳನ್ನು ಅನುಭವಿಸುವಂತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು 18 ವರ್ಷದ ಮೇಲ್ಪಟ್ಟು ಚಾಲನ ಪರವಾನಿಗೆಯನ್ನು ಪಡೆದು ವಾಹನಗಳನ್ನು ಓಡಿಸಬುಹುದು ಎಂದು ಮಾಹಿತಿ ನೀಡಿದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳು ಪುಸಕ್ತವನ್ನು ತೊರೆದು ಮೊಬೈಲ್ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರವಿದ್ದು, ಓದುವಿನ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್ ಕುಮಾರ್, ವಕೀಲ ನಝೀರ್ ಅಹ್ಮದ್, ಬಿ.ವಿ. ಮಂಜುಳಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಮೂಯೀನುದ್ದೀನ್, ಖ್ವಾಜಖಾನ್, ಎಸ್.ಎಂ.ಗಂಗಪ್ಪಳವರ, ಸೈಯದ್ ಖಾಲಿಖ್ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News