ಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟದಲ್ಲಿ ಇಬ್ಬರು ಆರೋಪಿಗಳ ಬಂಧನ
Update: 2017-08-23 20:46 IST
ಬೆಂಗಳೂರು, ಆ.23: ಗಾಂಜಾ ಮಾರಾಟ ದಂಧೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿ 16.2 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ ಮುಝಾಫೀರ್ ಮಂಡಲ್(24), ಆಂಧ್ರ ಪ್ರದೇಶದ ಆನಂತಪುರ ಮೂಲದ ಎಂ.ರವಿ(38) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ನಗರದ ಹರಳೂರು ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುಝಾಫೀರ್ ಮಂಡಲ್ ಎಂಬಾತನನ್ನು ಬಂಧಿಸಿ 1.2 ಕೆಜಿ ಗಾಂಜಾ ವಶಕ್ಕೆ ಪಡೆದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ದೇವರಬೀಸನಹಳ್ಳಿ ಗ್ರಾಮದ ಶನಿ ಮಹಾತ್ಮಾ ದೇವಸ್ಥಾನದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಆರೋಪಿ ರವಿ ಎಂಬಾತನನ್ನು ಬಂಧಿಸಿ 15 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.