ಭೀಕರ ರಸ್ತೆ ಅಪಘಾತ: ಇಬ್ಬರು ಮೃತ್ಯು, ಮೂವರಿಗೆ ಗಾಯ
ಮಂಡ್ಯ, ಆ.23: ಟಿಪ್ಪರ್ ಮತ್ತು ಕ್ವಾಲೀಸ್ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿ, ಮೂರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಎಂ. ಬಸವನಪುರದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಕ್ವಾಲಿಸ್‍ನಲ್ಲಿದ್ದ ಕೋಲಾರ ಜಿಲ್ಲೆ ಬಂಗಾರಪೇಟೆಯ ಶ್ರೀಪತಿ(30) ಮತ್ತು ವಿಜಯಕುಮಾರ್(32) ಅಪಘಾತದಲ್ಲಿ ಸಾವನ್ನಪ್ಪಿದ್ದು, ಪ್ರಭುಲಿಂಗದೇವರು, ನಾಗರಾಜು, ಆನಂದ ಗಾಯಗೊಂಡಿದ್ದಾರೆ.
ಕೊಳ್ಳೇಗಾಲದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಮತ್ತು ಮದ್ದೂರು ಕಡೆಯಿಂದ ಜೆಲ್ಲಿ ತುಂಬಿಕೊಂಡು ಎದುರಿಗೆ ಬರುತ್ತಿದ್ದ ಟಿಪ್ಪರ್ ನಡುವೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿದ್ದರು. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.