×
Ad

ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣಗಳೂ ಬೆಳೆಯುತ್ತದೆ: ಕೆ.ಅಣ್ಣಾಮಲೈ

Update: 2017-08-23 21:29 IST

ಚಿಕ್ಕಮಗಳೂರು, ಆ.23:  ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣಗಳೂ ಬೆಳೆಯುತ್ತದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.

  ಅವರು ಹೊಟೆಲ್ ಸೆರಾಯ್‍ನಲ್ಲಿ ನಡೆದ ಚಿಕ್ಕಮಗಳೂರು ಅಡ್ವೆಂಚರ್ ಸ್ಪೋಟ್ರ್ಸ್ ಕ್ಲಬ್‍ನ 2016-17 ನೇ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತರರಿಗೆ ಸಾಹಸ ಕ್ರೀಡೆಗಳ ಬಗ್ಗೆ ಮಾರ್ಗದರ್ಶನ ಮಾಡುವ ಮುನ್ನ ನಾವೂ ಅವುಗಳಲ್ಲಿ ಅನುಭವ ಹೊಂದಿರಬೇಕು. ಅದಿಲ್ಲದೆ ಮಾರ್ಗದರ್ಶನ ಮಾಡುವುದು ಸರಿಯಲ್ಲ ಎಂದರು.

  ಋಷಿಕೇಶ ಮತ್ತು ಲಡಾಕ್‍ಗಳಲ್ಲಿ ಟ್ರಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಿಗೆ ಸಾಕಷ್ಟು ಅವಕಾಶಗಳಿವೆ. ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿ ಸಾಹಸ ಕ್ರೀಡೆಗಳ ಅನುಭವಿ ತರಬೇತುದಾರರು ಸಾಕಷ್ಟು ಮಂದಿ ಇದ್ದಾರೆ. ಅವರನ್ನು ಕರೆಸಿ ಕ್ಲಬ್ ವತಿಯಿಂದ ಶಾಲಾ ಕಾಲೇಜು ಮಕ್ಕಳಿಗೆ ತರಬೇತಿ ಕೊಡಿಸುವ ಕೆಲಸ ಆಗಬೇಕು ಎಂದು ನುಡಿದರು.

  ಚಿಕ್ಕಮಗಳೂರಿಗೆ ಹೊರಗಿನಿಂದ ಬರುವ ಪ್ರವಾಸಿಗರು ಇಲ್ಲಿ ಟ್ರಕ್ಕಿಂಗ್ ಸೇರಿದಂತೆ ಸಾಹಸ ಕ್ರೀಡೆಗಳಿಗೆ ಅವಕಾಶವಿದೆಯೇ ಎಂದು ಸಾಕಷ್ಟು ಮಂದಿ ವಿಚಾರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಅವಕಾಶವಿರುವ ಪ್ರದೇಶಗಳನ್ನು ಗುರುತಿಸಬೇಕು ಎಂದ ಅವರು, ಪ್ರಯತ್ನವನ್ನೇ ಮಾಡದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಸಂದರ್ಭದಲ್ಲಿ ಮಕ್ಕಳಿಗೆ ಸಾಹಸ ಕ್ರೀಡೆಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದರು.

  ಕ್ಲಬ್‍ನ ಸದಸ್ಯರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. 40 ವರ್ಷ ವಯಸ್ಸಾಗುವ ಮುನ್ನ ಒಮ್ಮೆ ಬಂಗಿ ಜಂಪ್‍ನಂತಹ ಕ್ರೀಡೆಯಲ್ಲಿ ಭಾಗವಹಿಸಬೇಕು. ಸಾಹಸ ಕ್ರೀಡೆಗಳು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಧೈರ್ಯ ತುಂಬುತ್ತವೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಟ್ರಕ್ಕಿಂಗ್‍ನಂತಹ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

   ಉಪ ಅರಣ್ಯ ಸಂಕ್ಷಣಾಧಿಕಾರಿ ಚಂದ್ರಣ್ಣ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಸಾಹಸ ಕ್ರೀಡೆಗಳಿಗೆ ಸಾಕಷ್ಟು ಅವಕಾಶಗಳಿವೆ. ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ ಚಾರಣ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಈ ಜಿಲ್ಲೆಯಲ್ಲಿ ಅರಣ್ಯದಿಂದ ಹೊರತಾದ ಪ್ರದೇಶದಲ್ಲಿ ಟ್ರಕ್ಕಿಂಗ್ ಸೇರಿದಂತೆ ಇತರೆ ಸಾಹಸ ಕ್ರೀಡೆಗೆ ಅನುಕೂಲಕರವಾದ ಪ್ರದೇಶ ಸಾಕಷ್ಟಿದೆ ಎಂದು ಹೇಳಿದರು.

  ಕ್ಲಬ್‍ನ ಅಧ್ಯಕ್ಷೆ ನಳಿನ ಡಿ’ಸ ಮಾತನಾಡಿ, ಕ್ಲಬ್‍ನ ಕಾರ್ಯಕ್ರಮಗಳಿಗೆ ಎಲ್ಲ ಸದಸ್ಯರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಕ್ಲಬ್‍ಗೆ ಹೆಚ್ಚು ಮಂದಿ ಸದಸ್ಯರಾಗಬೇಕು. ಅಂತಹವರು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇತರರನ್ನೂ ಪ್ರೋತ್ಸಾಹಿಸಬೇಕು ಎಂದರು.

‘ಪದಾಧಿಕಾರಿಗಳ ಆಯ್ಕೆ: ಕ್ಲಬ್‍ನ ಗೌರವಾಧ್ಯಕ್ಷರಾಗಿ ಎಸ್ಪಿ ಕೆ.ಅಣ್ಣಾಮಲೈ ಮತ್ತು ಅಧ್ಯಕ್ಷರಾಗಿ ನಳಿನಾ ಡಿ’ಸ ಅವರನ್ನು ಮುಂದಿನ ಅವಧಿಗೂ ಮುಂದುವರಿಸಲು ಸಭೆ ತೀರ್ಮಾನಿಸಿತು. ಉಪಾಧ್ಯಕ್ಷರಾಗಿ ಡಾ.ವಿನಾಯಕ್, ಕಾರ್ಯದರ್ಶಿಯಾಗಿ ವಿವೇಕ್, ಸಹ ಕಾರ್ಯದರ್ಶಿಯಾಗಿ ಕಿರಣ್, ಚಂದ್ರಶೇಖರ್, ಖಜಾಂಚಿಯಾಗಿ ಉಜ್ವಲ್ ಪಡುಬಿದ್ರಿ, ಸದಸ್ಯರಾಗಿ ರೂಬಿನ್ ಮೋಸೆಸ್, ಕಿಶನ್ ಗೌಡ, ಕೃಷ್ಣ, ಮಧು ಆಯ್ಕೆಯಾದರು.

  ಪದನಿಮಿತ್ತ ಸದಸ್ಯರುಗಳಾಗಿ ಡಿಎಫ್‍ಓ ಚಂದ್ರಣ್ಣ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳ, ನೆಹರು ಯುವ ಕೇಂದ್ರದ ಮಂಜುನಾಥ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಜುರನ್ನು ಆಯ್ಕೆ ಮಾಡಲಾಯಿತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News