ಜಿಲ್ಲಾ ವೆಬ್‍ಸೈಟ್‍ಗೆ 108 ವಾಹನಗಳ ಕಾರ್ಯಸ್ಥಳ ವಿವರ: ಡಿಸಿ

Update: 2017-08-23 17:29 GMT

ತುಮಕೂರು,ಆ. 23: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 108 ಆರೋಗ್ಯ ಕವಚ ವಾಹನಗಳ ಕಾರ್ಯಸ್ಥಳ ವಿವರವನ್ನು ಜಿಲ್ಲಾ ವೆಬ್‍ಸೈಟ್‍ಗೆ ಕೂಡಲೇ ಅಪ್‍ಲೋಡ್ ಮಾಡಬೇಕೆಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಆರೋಗ್ಯ ಮಿಷನ್ ಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳನ್ನು ಸಾಗಿಸಲು ಅನುವಾಗುವಂತೆ 108 ವಾಹನಗಳು ನಿಗಧಿಪಡಿಸಿದ ಕಾರ್ಯಸ್ಥಳಗಳಲ್ಲಿಯೇ ಇರಬೇಕು.ಕರೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡಲು ನೆರವಾಗಬೇಕು ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 1 ಬೈಕ್ ಆಂಬುಲೆನ್ಸ್ ಸೇರಿ 36 ಆರೋಗ್ಯ ಕವಚ ವಾಹನಗಳ ಜೊತೆಗೆ ರಾಜ್ಯ ಸರಕಾರವು ಹೆಚ್ಚುವರಿಯಾಗಿ 23 ಹೊಸ ಆಂಬುಲೆನ್ಸ್‍ಗಳನ್ನು ಒದಗಿಸಿದ್ದು,ಅಪಘಾತಗಳು ಹೆಚ್ಚಾಗಿ ಸಂಭವಿಸುವ ಕಡೆ ಆಂಬುಲೆನ್ಸ್‍ಗಳ ಕಾರ್ಯ ಸ್ಥಳಗಳನ್ನು ಗುರುತಿಸಿ ನಿಗಧಿಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ:ಹೆಚ್.ವಿ.ರಂಗಸ್ವಾಮಿ ಸಭೆಗೆ ಮಾಹಿತಿ ನೀಡುತ್ತಾ, ಪ್ರಸ್ತುತವಾಗಿ  ಜಿಲ್ಲೆಯ ತುಮಕೂರು ತಾಲೂಕಿನಲ್ಲಿ 6, ಪಾವಗಡ-5, ಮಧುಗಿರಿ-2, ತಿಪಟೂರು-2, ಕೊರಟಗೆರೆ-3, ಗುಬ್ಬಿ-4, ಶಿರಾ-5, ಕುಣಿಗಲ್-3, ತುರುವೇಕೆರೆ-2, ಚಿಕ್ಕನಾಯಕನಹಳ್ಳಿಯಲ್ಲಿ-3 ಆರೋಗ್ಯ ಕವಚ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ರಾಜ್ಯ ಸರಕಾರದಿಂದ ಹಂಚಿಕೆಯಾಗಿರುವ 23 ಹೆಚ್ಚುವರಿ ಆಂಬುಲೆನ್ಸ್‍ಗಳ ಕಾರ್ಯಸ್ಥಳಗಳನ್ನು ಆದಷ್ಟು ಕೂಡಲೇ ನಿಗಧಿಗೊಳಿಸಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ:ಕೇಶವರಾಜ್ ಮಾತನಾಡಿ,ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಮಾಹೆಯಿಂದ ಜುಲೈ ಅಂತ್ಯದವರೆಗೆ ಹೆರಿಗೆ ಮುನ್ನ,ನಂತರದ ರಕ್ತಸ್ರಾವ, ಅಧಿಕ ರಕ್ತದೊತ್ತಡಗಳಿಂದ ತಾಯಿ ಮರಣ ಹಾಗೂ ಕಡಿಮೆ ತೂಕ, ಉಸಿರಾಟದ ತೊಂದರೆ, ದಿನ ತುಂಬದೆ ಹುಟ್ಟುವುದು, ಸೋಂಕು ಮತ್ತಿತರ ಕಾರಣಗಳಿಂದ 145 ಶಿಶು ಮರಣಗಳಾಗಿವೆ.

ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಮಧುಗಿರಿ ತಾಲ್ಲೂಕಿನ ಕವಣದಾಲ ಪ್ರಾಥಮಿಕ ಆರೋಗ್ಯ ಕೇಂದ್ರವು ಪ್ರಥಮ ಸ್ಥಾನ ಪಡೆದು ಕಾಯಕಲ್ಪ ಪ್ರಶಸ್ತಿ ಹಾಗೂ 2 ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡಿದೆ ಎಂದು ಡಾ: ಪ್ರಶಾಂತ್ ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ:ವೀರಭದ್ರಯ್ಯ,ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು,ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News