×
Ad

ದಿಲ್ಲಿಗೆ ಹೋಗದೆ ರಾಜ್ಯದಲ್ಲಿ ಪಕ್ಷ ಸಂಘಟನೆ: ಎಚ್.ಡಿ.ದೇವೇಗೌಡ

Update: 2017-08-23 23:26 IST

ಹುಬ್ಬಳ್ಳಿ, ಆ.23: ನಾನು ಇನ್ನು ಮುಂದೆ ಹೊಸದಿಲ್ಲಿಗೆ ಹೋಗುವುದಿಲ್ಲ. ರಾಜ್ಯದಲ್ಲೇ ಇದ್ದುಕೊಂಡು ಜೆಡಿಎಸ್ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಐದು ದಿನಗಳಿಂದ ಪ್ರವಾಸ ಕೈಗೊಂಡಿದ್ದೇನೆ. ಆನಂತರ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಾಗುವುದು ಎಂದರು.

ಪಕ್ಷದ ಸಂಘಟನೆ ಹಾಗೂ ಪ್ರಮುಖರನ್ನು ಭೇಟಿ ಮಾಡಲು ಆರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿಯೊಂದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಪಕ್ಷದ ಸ್ಥಿತಿಗತಿ ಕುರಿತು ವರದಿ ನೀಡಲಿವೆ ಎಂದು  ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಸೆಪ್ಟಂಬರ್‌ನಲ್ಲಿ ಮಾಡಲಾಗುವುದು. ಸಿ ಫೋರ್ ಸಮಿಕ್ಷೆಯಿಂದ ಕೆಲವರಿಗೆ ಖುಷಿ ಮತ್ತು ಕೆಲವರಿಗೆ ನಿರಾಸೆಯಾಗಿರಬಹುದು. ಆದುದರಿಂದ, ಜೆಡಿಎಸ್ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದರ ಕುರಿತು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದರು.

ರೈತರ ಸಾಲಮನ್ನಾ ಮಾಡುವಂತೆ ಕೇಳಿಕೊಂಡು ದಿಲ್ಲಿಗೆ ಹೋಗುವುದು ಬೇಡ, ಇಲ್ಲೆ ನಮ್ಮ ರಾಜ್ಯದಲ್ಲೇ ಸಾಲಮನ್ನಾ ಮಾಡುವಂತಹ ಸರಕಾರವನ್ನು ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ ಎಂದ ಅವರು, ಕೇಂದ್ರ ಸರಕಾರಕ್ಕೆ ಕೆಲವು ರಾಜ್ಯಗಳು ಮಾತ್ರ ಕಾಣಿಸುತ್ತಿವೆ ಎಂದು ಟೀಕಿಸಿದರು.

ಮಹಾದಾಯಿ ಜಲ ವಿವಾದವನ್ನು ಬಗೆಹರಿಸುವುದು ಪ್ರಧಾನಿ ನರೇಂದ್ರಮೋದಿಗೆ ದೊಡ್ಡ ವಿಚಾರವಲ್ಲ. ಆದರೂ, ಇದರಲ್ಲಿ ರಾಜಕೀಯ ಮಾಡುವುದು ಯಾಕೆ ನಾನು ಕಾವೇರಿ ವಿಚಾರದಲ್ಲಿ ತೆಗೆದುಕೊಂಡಂತೆ ಮೋದಿ ನಿರ್ಧಾರ ತೆಗೆದುಕೊಳ್ಳಲಿ ಎಂದು ದೇವೇಗೌಡ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಎಲ್ಲಿ ಪಾರದರ್ಶಕ ಸರಕಾರ ಕೊಟ್ಟಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನವರ ಬಂಡವಾಳ ನನಗೆ ಗೊತ್ತು. ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ, ಮೂರುವರೆ ವರ್ಷ ಯಡಿಯೂರಪ್ಪ ಸರಕಾರದ ವಿರುದ್ಧ ಯಾವತ್ತಾದರೂ ಮಾತನಾಡಿದ್ದಾರ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News