ವಿಧಾನ ಪರಿಷತ್‌ಗೆ ಸಿಎಂ ಇಬ್ರಾಹೀಂ ಅವಿರೋಧ ಆಯ್ಕೆ

Update: 2017-08-24 16:40 GMT

ಬೆಂಗಳೂರು, ಆ.24: ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ.ಇಬ್ರಾಹೀಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿರುವ ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ ಘೋಷಣೆ ಮಾಡಿದರು.

ವಿಧಾನಪರಿಷತ್‌ನ ಸದಸ್ಯೆ ವಿಮಲಾ ಗೌಡ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ತಟಸ್ಥವಾಗಿದ್ದರು. ಆಡಳಿತರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಿ.ಎಂ.ಇಬ್ರಾಹೀಂ ನಾಮಪತ್ರವನ್ನು ಸಲ್ಲಿಸಿದ್ದರು. ನಾಮಪತ್ರವನ್ನ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಚುನಾವಣಾ ಕಣದಲ್ಲಿ ಬೇರೆಯಾವ ಅಭ್ಯರ್ಥಿಯು ಇಲ್ಲದ ಕಾರಣ ಸಿ.ಎಂ.ಇಬ್ರಾಹೀಂ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಎಸ್.ಮೂರ್ತಿ ಪ್ರಕಟಿಸಿದರು.

ಚುನಾವಣಾ ಅಧಿಕಾರಿಯಿಂದ ತಮ್ಮ ಆಯ್ಕೆಯ ಪ್ರಮಾಣ ಪತ್ರವನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನನ್ನ ಮೇಲೆ ವಿಶ್ವಾಸವಿಟ್ಟು ವಿಧಾನಪರಿಷತ್‌ಗೆ ಆಯ್ಕೆ ಮಾಡಿದೆ. ವಿಧಾನಪರಿಷತ್‌ನ ಘನತೆಯನ್ನು ಎತ್ತಿಹಿಡಿಯುವಂತೆ ಕಲಾಪಗಳಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಸರಕಾರ ನೀಡಿರುವ ಸ್ಥಾನವನ್ನು ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ನನ್ನ ರಾಜಕೀಯ ಅನುಭವವನ್ನು ವಿಧಾನಪರಿಷತ್ ಕಾರ್ಯಕಲಾಪಗಳಲ್ಲಿ ಬಳಸಿಕೊಳ್ಳಲಿದ್ದೇನೆ.

ಸಿ.ಎಂ.ಇಬ್ರಾಹೀಂ ನೂತನ ವಿಧಾನಪರಿಷತ್ ಸದಸ್ಯ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News