ಕಡೂರು ಕ್ಷೇತ್ರದ 20 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಅನುದಾನ ಮಂಜೂರು: ದತ್ತ
ಕಡೂರು, ಆ. 24: ಕಡೂರು ಕ್ಷೇತ್ರದ 20 ಹಳ್ಳಿಗಳಿಗೆ ಭದ್ರಾ ಕುಡಿಯುವ ನೀರಿನ ಯೋಜನೆಗೆ ರೂ. 16.71 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಅವರು ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು. ಟೆಂಡರ್ ಸೆ. 28ಕ್ಕ ಕೊನೆಯ ದಿನವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಈ ಕಾಮಗಾರಿಗೆ ಚಾಲನೆ ಸಿಗಲಿದೆ. ಕ್ಷೇತ್ರದ ದೊಡ್ಡಘಟ್ಟ, ಹೋರಿತಿಮ್ಮನಹಳ್ಳಿ, ಹನುಮಾಪುರ, ಕಾರೇಹಳ್ಳಿ, ಜೋಡಿತಿಮ್ಮಾಪುರ, ಗಾಳಿಹಳ್ಳಿ, ಬ್ಯಾಗಡೇಹಳ್ಳಿ, ತುರುವನಹಳ್ಳಿ, ಚೌಡ್ಲಪುರ, ಕಲ್ಲಾಪುರ, ಬಂಟಗನಹಳ್ಳಿ, ಹರುವನಹಳ್ಳಿ, ತಂಗಲಿ, ಬಂಡಿಕೊಪ್ಪಲು, ಚಿಕ್ಕಪಟ್ಟಣಗೆರೆ, ಅಂದೇನಹಳ್ಳಿ, ಚಿಕ್ಕಂಗಳ, ಮಚ್ಚೇರಿ, ಮಲ್ಲೇಶ್ವರ ಮತ್ತು ದೊಂಬರಹಳ್ಳಿ ಗ್ರಾಮಗಳು ಸೇರಿವೆ ಎಂದು ಹೇಳಿದರು.
ಈ 20 ಗ್ರಾಮಗಳಿಗೆ ಪೈಪ್‍ಲೈನ್ ಮೂಲಕ ನೀರು ಸರಬರಾಜು ಮಾಡಲಾಗುವುದು ಅಗತ್ಯವಿರುವ ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣವು ಸೇರಿದೆ, ಈ ಯೋಜನೆಯ ನಿರ್ವಹಣೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೋಡಿಕೊಳ್ಳುತ್ತದೆ. ಭದ್ರಾ ಕುಡಿಯುವ ನೀರು ತಮ್ಮ ಅವದಿಯಲ್ಲಿಯೇ ಕಡೂರು, ಬೀರೂರು ಮತ್ತು 20 ಹಳ್ಳಿಗಳಿಗೆ ನೀರು ನೀಡುತ್ತಿರುವುದು ದೊಡ್ಡ ಸಾಧನೆಯಾಗಿದೆ, ಇನ್ನೂ ಈ ಗ್ರಾಮಗಳಿಗೆ ಕೊಳವೆಬಾವಿ ಕೊರೆಸುವ ಅಗತ್ಯವಿರುವುದಿಲ್ಲ, ಭದ್ರಾ ನೀರು ಕೊಡಿಸಿದ ಸಾಧನೆಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಡೂರು-ಬೀರೂರು ಮತ್ತು 24 ಹಳ್ಳಿಗಳಿಗೆ 10 ವರ್ಷಗಳ ಹಿಂದೆ ಈ ಯೋಜನೆ ರೂಪಿಸಿದಾಗ 24*7 ನೀರು ಸರಬರಾಜು ಎಂದು ಹೇಳಲಾಗಿತ್ತು. ಈಗ ಕಡೂರು-ಬೀರೂರು ಪಟ್ಟಣಗಳಿಗೆ 24*7 ನೀರು ಬರುತ್ತಿಲ್ಲ. ಈ ಪಟ್ಟಣಗಳಿಗೆ ವಾರಕ್ಕೆ ಒಂದು ದಿನಮಾತ್ರ ನೀರು ಬರುತ್ತಿದೆ. ಈ ಯೋಜನೆಯ ನೀರು 24*7 ಬದಲು 6*7 ಅಥವಾ ದಿನಕ್ಕೆ ಒಂದು ಬಾರಿಯಾದರೂ ಭದ್ರಾ ಕುಡಿಯುವ ನೀರು ಬರುವಂತೆ ಆಗಲಿ, ಜೊತೆಗೆ 20 ಹಳ್ಳಿಗಳಿಗೂ ನೀರು ಕೊಡುವಂತೆ ಆಗಲಿ. ಯೋಜನೆ ರೂಪಿಸುವಾಗ ತರಾತುರಿಯಲ್ಲಿ ಮಾಡಿದ್ದಾರೆ ಎಂಬ ಸಂಶಯ ಕಾಡುತ್ತಿದೆ ಎಂದರು.
ಕಡೂರು-ಬೀರೂರು ಪಟ್ಟಣದ ಜನತೆ 20 ಹಳ್ಳಿಗಳಿಗೆ ನೀರು ಕೊಟ್ಟರೇ ತಮಗೆ ತೊಂದರೆಯಾಗುತ್ತದೆ ಎಂಬ ಆತಂಕ ಬೇಡ ಎಂದ ಅವರು, ಬಸವ ವಸತಿ ಯೋಜನೆಯಡಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 400 ಮನೆಗಳು ಮಂಜೂರಾಗಿದ್ದು, ಕ್ಷೇತ್ರದಲ್ಲಿ ದಾಕಲೆಯಯಷ್ಟು ಮನೆಗಳನ್ನು ತಂದಿದ್ದೇನೆ, ಈ ಮನೆಗಳನ್ನು ಬರಿ ತಮ್ಮ ಪಕ್ಷದ ಕಾಯ್ಕರ್ತರಿಗೆ ಮಾತ್ರ ಹಂಚಿಲ್ಲ. ಇತರೆ ಪಕ್ಷದ ಕಾರ್ಯಕರ್ತರಿಗೂ ಮತ್ತು ಬಡವರಿಗೆ ಹಂಚಿದ್ದೇನೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿಶ್ರೀನಿವಾಸ್, ಎಪಿಎಂಸಿ ನಿರ್ದೇಶಕ ಜಗದೀಶ್, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.