ಮಡಿಕೇರಿ: ಗ್ರಾಪಂ ನೌಕರರ ಭಡ್ತಿಗೆ ಸಿಐಟಿಯು ಒತ್ತಾಯ
ಮಡಿಕೇರಿ, ಆ.24 : ಜಿಲ್ಲಾ ಪಂಚಾಯತ್ ಪ್ರಮುಖ ಹುದ್ದೆಗಳನ್ನು ಭರ್ತಿಮಾಡಬೇಕು ಮತ್ತು ಗ್ರಾಮ ಪಂಚಾಯತ್ ನೌಕರರಿಗೆ ಭಡ್ತಿ ಹಾಗೂ ಕನಿಷ್ಠ ವೇತನವನ್ನು ನೀಡಬೇಕೆಂದು ಒತ್ತಾಯಿಸಿ ಸೆ.14 ರಂದು ‘ನಮ್ಮ ಮಹಾ ನಡೆ ಬೆಂಗಳೂರಿನ ಕಡೆ’ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯತ್ ನೌಕರರ ಸಂಘ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಆರ್.ಭರತ್, ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ಕಾರ್ಯದರ್ಶಿ ಹಾಗೂ ಮುಖ್ಯ ಯೋಜನಾಧಿಕಾರಿಗಳ ಹುದ್ದೆ ಖಾಲಿ ಇವೆ. ಈ ಪ್ರಮುಖ ಹುದ್ದೆಗಳು ಭರ್ತಿಯಾಗದೆ ಇರುವಾಗ ಗ್ರಾಮ ಪಂಚಾಯತ್ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರು ಯಾರು ಎಂದು ಪ್ರಶ್ನಿಸಿದರು.
ಜಿಲ್ಲೆಯ 104 ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯದರ್ಶಿ, ಲೆಕ್ಕಾಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿ ಇದ್ದು, ಗ್ರಾಮದ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶೇ.70ರ ಮೀಸಲಾತಿಯಡಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರಾಗಿ ಭಡ್ತಿ ಹೊಂದಬೇಕಾದ 23 ಬಿಲ್ ಕಲೆಕ್ಟರ್‍ಗಳು ಭಡ್ತಿಯಿಂದ ವಂಚಿತರಾಗಿ ವಯೋ ನಿವೃತ್ತಿ ಹಂತಕ್ಕೆ ಬಂದು ತಲುಪಿದ್ದಾರೆ ಎಂದು ದೂರಿದರು.
ಅಧಿಕಾರಿಗಳ ನೇಮಕ ಮತ್ತು ಸಂಘದ ವಿವಿಧ ಬೇಡಿಕೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.
ಬೇಡಿಕೆಗಳು
ಗ್ರಾಪಂ ನೌಕರರಿಗೆ ರೂ. 18,000 ಕನಿಷ್ಠ ವೇತನ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯನಿಧಿ ಮತ್ತು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೆ ತರಬೇಕು, ಬೆಲೆ ಏರಿಕೆ ನಿಯಂತ್ರಣ ಮಾಡಬೇಕು, ಸಾರ್ವತ್ರಿಕ ರೇಷನ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು, ಗುತ್ತಿಗೆ ಪದ್ಧತಿ ನಿಯಂತ್ರಣ ಮಾಡಬೇಕು, ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಬೇಕು, ಕಾರ್ಮಿಕ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು, ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು, ಸ್ಕೀಂ ಕಾರ್ಮಿಕರಿಗೂ ಕನಿಷ್ಠ ವೇತನ ನೀಡಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡಬೇಕೆಂದು ಒತ್ತಾಯಿಸಿ ಮತ್ತು ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಭರತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಉಮೇಶ್, ಉಪಾಧ್ಯಕ್ಷರಾದ ವಿಠಲ, ಮಡಿಕೆÉೀರಿ ತಾಲ್ಲೂಕು ಕಾರ್ಯದರ್ಶಿ ಲೀಲಾವತಿ ಹಾಗೂ ವೀರಾಜಪೇಟೆ ಉಪಾಧ್ಯಕ್ಷರಾದ ಎನ್.ಕೆ.ಹರೀಶ್ ಉಪಸ್ಥಿತರಿದ್ದರು.