ಸಚಿವ ಜಾರ್ಜ್ ರಾಜಿನಾಮೆಗೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯ
ಮಡಿಕೇರಿ, ಆ.24: ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನಾಶಪಡಿಸಿದ ಬಗ್ಗೆ ಮಾಹಿತಿ ದೊರೆತಿದ್ದು, ಇದರ ನೇರ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಬೇಕು ಮತ್ತು ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣ ಸಾಕ್ಷ್ಯಗಳ ನಾಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ಕೈವಾಡವಿದೆ ಎಂದು ಆರೋಪ ಮಾಡಿದರು.
ಬಿಜೆಪಿ ಹೋರಾಟ ನಡೆಸುತ್ತಿರುವುದು ರಾಜಕೀಯ ಪ್ರೇರಿತವೋ ಅಥವಾ ಸಾಕ್ಷ್ಯಾಧಾರಗಳನ್ನು ನಾಶ ಮಾಡುವುದು ರಾಜಕೀಯ ಪ್ರಚೋದನೆಯೋ ಎಂಬುವುದನ್ನು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಬೇಕು. ಗಣಪತಿ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಾಗಿದೆ ಎಂದು ಟೀಕಿಸಿದರು.
ತ್ರಿವಳಿ ತಲಾಖ್‍ನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪ ಸ್ವಾಗತಾರ್ಹವಾಗಿದ್ದು, ಮುಸ್ಲಿಂ ಮಹಿಳೆಯರಿಗೆ ಅನಿಷ್ಟ ಪದ್ಧತಿಯಿಂದ ಮುಕ್ತಿ ದೊರಕಿದೆಯೆಂದು ಅಭಿಪ್ರಾಯಪಟ್ಟರು. 1985 ರಲ್ಲಿ ನ್ಯಾಯಾಲಯ ಇದೇ ತೀರ್ಮಾನವನ್ನು ತೆಗೆದುಕೊಂಡಿತ್ತಾದರು ಅಂದು ಆಡಳಿತದಲ್ಲಿದ್ದ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆದೇಶ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ದೂರಿದರು.
ತಲಾಖ್ ಬಗ್ಗೆ ಸಂತ್ರಸ್ತ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ ಹಿನ್ನೆಲೆ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಪವಾಗಿ ವಾದ ಮಂಡಿಸಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಸೆ.4 ರಂದು ಸೋಮವಾರಪೇಟೆಯಲ್ಲಿ ನಡೆಯಲಿದ್ದು, ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ, ಮಡಿಕೇರಿ ತಾಲೂಕು ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ನಗರಾಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು.