×
Ad

ಚಿಕ್ಕಬಳ್ಳಾಪುರ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಧರಣಿ

Update: 2017-08-24 23:55 IST

ಚಿಕ್ಕಬಳ್ಳಾಪುರ, ಆ.24: ರೈತರ ಸಂಪೂರ್ಣ ಸಾಲ ಮನ್ನಾ, ಶಾಶ್ವತ ನೀರಾವರಿ ಯೋಜನೆಗಳನ್ನು ಶೀಘ್ರ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.

ರೈತ ಸಂಘದ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಮಾತನಾಡಿ, ಜಿಲ್ಲೆ ಕೋಲಾರದಿಂದ ಬೇರ್ಪಟ್ಟು ಹತ್ತು ವರ್ಷಗಳೇ ಕಳೆದಿದೆ, ಆದರೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ 30 ವರ್ಷಗಳೇ ಕಳೆದಿದ್ದರೂ ಈ ಭಾಗದ ಜನರ ದಾಹ ತೀರಿಸುವಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳೂ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.

ಎತ್ತಿನ ಹೊಳೆ ಸೇರಿದಂತೆ ಹತ್ತಾರು ಯೋಜನೆಗಳ ಹೆಸರಿನಲ್ಲಿ ಬಯಲು ಸೀಮೆ ಭಾಗದ ಜನರಿಗೆ ಮಂಕು ಬೂಧಿ ಎರಚುತ್ತಿರುವ ರಾಜಕಾರಣಿಗಳು ಕೇವಲ ಅಂಗೈಯಲ್ಲಿ ಸ್ವರ್ಗ ತೋರಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಪ್ರತಿ ಚುನಾವಣೆಯಲ್ಲಿಯೂ ಶಾಶ್ವತ ನೀರಾವರಿ ಎಂಬುದು ವಸ್ತುವಾಗಿ ಪರಿಣಮಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ, ರಾಜದ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ರೈತರ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ. ಸಹಕಾರ ಸಂಘಗಳಲ್ಲಿನ 50 ಸಾವಿರ ರೂ. ರೈತರ ಸಾಲ ಮನ್ನಾ ಮಾಡಿರುವ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ವಿಪರ್ಯಾಸ ಎಂದ ಅವರು, ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರುವುದನ್ನು ಬಿಟ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬಯಲು ಸೀಮೆ ಭಾಗಕ್ಕೆ ಕೃಷಿಗೆ ಅಗತ್ಯವಿರುವ ಶಾಶ್ವತ ನೀರಾವರಿ ಯೋಜನೆಗಳನ್ನು ನುಷ್ಠಾನಗೊಳಿಸಲು ಸಮರೋಪಾದಿಯಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ರೈತ ನಿರಂತರವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ ಸರ್ಕಾರ ಕೂಡಲೇ ರೈತ ಬೆಳೆಗೆ ಬೆಂಬಲ ಬೆಲೆ ನೀಡಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಗೌರಿಬಿದನೂರು ತಾಲೂಕು ಅಧ್ಯಕ್ಷ ಲೋಕೇಶ್‍ಗೌಡ, ಬಾಗೇಪಲ್ಲಿ ಅಧ್ಯಕ್ಷ ನಾರಾಯಣಸ್ವಾಮಿ, ಚಿಂತಾಮಣಿ ಅಧ್ಯಕ್ಷ ರಘುನಾಥರೆಡ್ಡಿ, ಶಿಡ್ಲಘಟ್ಟ ಅಧ್ಯಕ್ಷ ಮಂಜುನಾಥ್, ಪ್ರವೀಣ್, ಕಿರಣ್, ಅಶೋಕ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News