×
Ad

ಶಿಡ್ಲಘಟ್ಟ,

Update: 2017-08-25 00:11 IST

ಶಿಡ್ಲಘಟ್ಟ, ಆ.24: ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಕೊಡುವವರೆಗೆ ರೈತರ ಸಾಲಕ್ಕೆ ಸರ್ಕಾರವೇ ಹೊಣೆ ಎಂಬ ಘೋಷಣೆಯೊಂದಿಗೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಸಾಲ ಪಡೆದಿರುವ ರೈತರಿಂದ ಅರ್ಜಿ ಸಂಗ್ರಹಣೆ ಮಾಡುತ್ತಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಕಲಾವಿದರ ಮೂಲಕ ರೈತರ ಬವಣೆಯ ಬಗ್ಗೆ ಹಾಡನ್ನು ಹಾಡಿಸಿ, ಸಾಲ ಪಡೆದಿರುವ ರೈತರಿಂದ ಸರ್ಕಾರಕ್ಕೆ ಸಲ್ಲಿಸಲು ಅರ್ಜಿಯನ್ನು ಸಂಗ್ರಹಿಸುವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈವರೆಗೆ ಸರ್ಕಾರಗಳಿಂದ ಕೃಷಿ ನೀರಾವರಿಯಂತಹ ಮೂಲಭೂತ ಸೌಕರ್ಯ ಇಲ್ಲದೆ, ಕೃಷಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಹಾಗೂ ಬೆಲೆ ಭದ್ರತೆ ಇಲ್ಲದೆ, ಸತತ ಬರಗಾಲದಿಂದಾಗಿ ರೈತರು ಬ್ಯಾಂಕು, ಫೈನಾನ್ಸ್ ಮತ್ತು ಖಾಸಗಿ ಕೈ ಸಾಲಗಳಿಂದ ತತ್ತರಿಸಿ ಹೋಗಿದ್ದಾರೆ. ಗ್ರಾಮೀಣ ಮಹಿಳೆಯರು, ಕೃಷಿ ಸಂಬಂಧಿ ಎಲ್ಲಾ ಸಾಲಗಳ ತೀರುವಳಿಯನ್ನು ಸರ್ಕಾರವೇ ಮಾಡಿಕೊಳ್ಳಬೇಕೆಂದು ಮನವಿಯನ್ನು ಸಲ್ಲಿಸುತ್ತಿದ್ದೇವೆ.

ಸಾಲದ ಶೂಲಕ್ಕೆ ಸಿಕ್ಕ ಜಿಲ್ಲೆಯಲ್ಲಿ ಎಂಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಂದ ಸ್ವಯಂಪ್ರೇರಿತವಾಗಿ ಅರ್ಜಿಗಳನ್ನು ಪಡೆದು ಆಗಸ್ಟ್ 28 ರ ಸೋಮವಾರದಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಕಾರ್ಯಾಂಗ ಮತ್ತು ಶಾಸಕಾಂಗ ರೈತರ ಕಷ್ಟಕ್ಕೆ ಸ್ಪಂದಿಸದಿರುವುದರಿಂದ ಸುಪ್ರೀಂ ಕೋರ್ಟಿನಲ್ಲಿ ದಾವೆಯನ್ನು ಹೂಡುವ ಮೂಲಕ ರೈತರನ್ನು ಉಳಿಸುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದರು.

ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರಿಂದ ಅರ್ಜಿಯನ್ನು ಸಂಗ್ರಹಿಸಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ರಾಮಕೃಷ್ಣಪ್ಪ, ವೇಣುಗೋಪಾಲ್, ಬಿ.ನಾರಾಯಣಸ್ವಾಮಿ, ಮುನಿನಂಜಪ್ಪ ಕೃಷ್ಣಪ್ಪ ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News