ಸಿದ್ದಾಪುರ : ಭಾರತದ ಗುಂಪು ಹಿಂಸಾ ಹತ್ಯೆಯ ವಿರುದ್ಧ ಬೃಹತ್ ಮಾನವ ಸರಪಳಿ
ಸಿದ್ದಾಪುರ, ಆ.25: ಗೋವಿನ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಎಂಬ ಘೋಷಣೆಯೊಂದಿಗೆ ಎಸ್‍ಡಿಪಿಐ ಪಕ್ಷ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಸಮಾರೋಪದ ಅಂಗವಾಗಿ ಮನೆಯಿಂದ ಹೊರಗೆ ಬನ್ನಿ ಎಂಬ ಹೆಸರಿನಲ್ಲಿ ಸಿದ್ದಾಪುರದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಬೃಹತ್ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಇಲ್ಲಿನ ಮುಖ್ಯ ರಸ್ತೆಯಲ್ಲಿ ಕಪ್ಪು ಪಟ್ಟಿಯನ್ನು ಕಟ್ಟಿ ಗುಂಪು ಹಿಂಸೆಯಲ್ಲಿ ಹತ್ಯೆಯಾದವರ ಹಾಗೂ ಗೋವಿನ ಮುಖವಾಡವನ್ನು ಧರಿಸಿ, ಆತ್ಮ ರಕ್ಷಣೆ ಅಪರಾಧವಲ್ಲ, ಮನೆಯಿಂದ ಹೊರಗೆ ಬನ್ನಿ ಎಂಬ ಫಲಕವನ್ನು ಹಿಡಿದು 20 ನಿಮಿಷಗಳ ಕಾಲ ಮೌನವಾಗಿ ನಿಲ್ಲುವುದರ ಮೂಲಕ ನೂರಾರು ಮಂದಿ ಮಾನವ ಸರಪಳಿಯಲ್ಲಿ ಭಾಗವಹಿಸಿದರು.
ಎಸ್‍ಡಿಪಿಐ ಪಕ್ಷದ ಮುಸ್ತಫ ಮಾತನಾಡಿ, ನರೇಂದ್ರ ಮೋದಿ ಅಧಿಕಾರಕ್ಕೇರಿದ ಬಳಿಕ ಕಳೆದ ಮೂರು ವರ್ಷದಲ್ಲಿ ಗೋ ರಕ್ಷಣೆಯ ಮುಖವಾಡದಲ್ಲಿ ರಾಕ್ಷಸರ ಗುಂಪು 31 ಮಂದಿ ಮುಸಲ್ಮಾನರ ಹಾಗೂ 8 ಮಂದಿ ದಲಿತರ ಹತ್ಯೆ ಮಾಡಲಾಗಿದೆ. ಗೋ ರಕ್ಷಕರಿಗೆ ಗೋವುಗಳ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯ ಶಾಸಕರು ಮತ್ತು ನಾಯಕರು ಉತ್ತರಪ್ರದೇಶ ಹಾಗೂ ಜಾರ್ಖಂಡ್‍ನಲ್ಲಿ ನಡೆಸುತ್ತಿರುವ ಬೀಫ್ ರಫ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಲಿ.
ಗೋವಿನ ಹೆಸರಿನಲ್ಲಿ ಭವನಾತ್ಮಕವಾಗಿ ಹಿಂದೂ ಮತ್ತು ಮುಸಲ್ಮಾನರನ್ನು ವಿಭಜಿಸುವ ರಾಜಕೀಯ ಷಡ್ಯಂತರವನ್ನು ಬಿಜೆಪಿ ಮತ್ತು ಸಂಘಪರಿವಾರ ರೂಪಿಸುತ್ತಿದೆ ಎಂದು ಆರೋಪಿಸಿದ ಅವರು, ದೇಶದಲ್ಲಿ ನಡೆಯುತ್ತಿರುವ ಗುಂಪು ಹಿಂಸೆಯನ್ನು ಸಂವಿಧಾನಿಕವಾಗಿ ಪ್ರತಿರೋಧಿಸುವ ಸಂದೇಶವನ್ನು ಈ ಅಭಿಯಾನದ ಮೂಲಕ ದೇಶದ ಜನತೆಗೆ ನೀಡುತ್ತಿದ್ದು, ಇದು ಜನತೆಯ ಅಭಿಯಾನವಾಗಿದೆ ಎಂದರು.
ಮಾನವ ಸರಪಳಿಯಲ್ಲಿ ಎಸ್‍ಡಿಪಿಐ ಜಿಲ್ಲಾ ಕೋಶಾಧಿಕಾರಿ ಇಬ್ರಾಹೀಂ ಗೋಣಿಕೊಪ್ಪ, ಸಿದ್ದಾಪುರ ಘಟಕದ ಅಧ್ಯಕ್ಷ ಶಾಹುಲ್, ಗ್ರಾ.ಪಂ ಸದಸ್ಯರಾದ ಹುಸೈನ್, ಶೌಕತ್ ಅಲಿ, ಸಂಶೀರ್ ಪ್ರಮುಖರಾದ ಬಶೀರ್, ಅಫ್ಸಲ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.