ಎಸ್ಎಂ ಕೃಷ್ಣ ಮೊಮ್ಮಗ, ಕಾಂಗ್ರೆಸ್ ಮುಖಂಡ ಡಾ. ನಿರಂತರ ಗಣೇಶ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ
Update: 2017-08-25 21:53 IST
ಚಿಕ್ಕಮಗಳೂರು, ಆ. 25: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಮೊಮ್ಮಗ, ಕಾಂಗ್ರೆಸ್ ಮುಖಂಡ ಡಾ. ನಿರಂತರ ಗಣೇಶ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದ ಬಗ್ಗೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ವೆಂಕಟೇಶ್ವರ ನಗರದಲ್ಲಿ ವಾಸವಾಗಿದ್ದ ಡಾಕ್ಟರ್ ನಿರಂತರ ಗಣೇಶ್ ಅವರು ಕಡೂರು ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ಸಮಾಜ ಸೇವೆ ಮತ್ತು ಜನರ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಹಬ್ಬಕ್ಕೆ ಬೆಂಗಳೂರಿಗೆ ಕುಟುಂಬ ಸಮೇತ ತೆರಳಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ ನಡೆಸಿದ ಬಗ್ಗೆ ತಿಳಿದುಬಂದಿದೆ.
ಸ್ಥಳಕ್ಕೆ ಕಡೂರು ಪೊಲೀಸರು ಮತ್ತು ಶ್ವಾನ ದಳ ಭೇಟಿನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.