ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸಲು ಡಿಸಿಗೆ ಮನವಿ
ತುಮಕೂರು,ಆ.26: ನಡುವನಹಳ್ಳಿ, ಜೆ.ಸಿ.ಪುರ,ಗೋಡೆಕೆರೆ, ನಾಗೇನಹಳ್ಳಿ ಹಾಗೂ ಬ್ಯಾಡರಹಳ್ಳಿ ಕೆರೆಗೆ ಏತ ನೀರಾವರಿ ಮೂಲಕ ಹೇಮಾವತಿ ನಾಲೆಯಿಂದ ನೀರು ಹರಿಸುವಂತೆ ಗೋಡೆಕೆರೆಯ ಶ್ರೀಮೃತ್ಯಂಜಯ ದೇಶಿಕೇಂದ್ರಸ್ವಾಮೀಜಿ ಅವರ ನೇತೃತ್ವದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು,ಜಿ.ಪಂ.ಸದಸ್ಯರು,ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಐದಾರು ವರ್ಷಗಳ ಸತತ ಬರಗಾಲದಿಂದಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಕಳೆದ ಎರಡು ವರ್ಷದ ಹಿಂದೆಯೇ ಗೋಡೆಕೆರೆ, ನಡುವನಹಳ್ಳಿ, ಜೆ.ಸಿ.ಪುರ,ನಾಗೇನಹಳ್ಳಿ ಹಾಗೂ ಬ್ಯಾಡರಹಳ್ಳಿ ಕೆರೆಗೆ ನೀರು ಹರಿಸುವ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದ್ದರೂ ಒಂದರೆಡು ಬಾರಿ ನೀರು ಹರಿದಿರುವುದನ್ನು ಬಿಟ್ಟರೆ ಈ ವರ್ಷ ಇದುವರೆಗೂ ಒಂದು ತೊಟ್ಟು ನೀರು ಹರಿದಿಲ್ಲ. ಇದರಿಂದ ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣ ವಾಗಿದೆ. ಆದ್ದರಿಂದ ಏತ ನೀರಾವರಿ ಮೂಲಕ ಮೇಲಿನ ಕೆರೆಗಳಿಗೆ ನೀರು ಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್‍ಬಾಬು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಈ ಏತ ನೀರಾವರಿಯಿಂದ ಈ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿತ್ತು. ಆದರೆ ಈ ವರ್ಷ ಇದುವರೆಗೂ ಕುಡಿಯುವ ನೀರು ನೀಡಿಲ್ಲ. ಇದುವರೆಗೂ ಟ್ಯಾಂಕರ್ ಮೂಲಕ 15 ದಿನಗಳಿಗೆ ಒಮ್ಮೆ ಈ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮೇಲಿನ ಕೆರೆಗಳಿಗೆ ಕುಡಿಯುವ ನೀರು ಹರಿಸುವಂತೆ ಮನವಿ ಮಾಡಲಾಗಿದೆ ಎಂದರು.
ಪ್ರಸ್ತುತ ಕುಣಿಗಲ್ ಪಟ್ಟಣ ಮತ್ತು ಆ ಭಾಗದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹೇಮಾವತಿ ನೀರು ಹರಿಸುತ್ತಿದ್ದು, ಸೆಪ್ಟಂಬರ್ 8 ರಿಂದ ನಿರಂತರವಾಗಿ ಒಂದು ತಿಂಗಳ ಕಾಲ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ ಎಂದು ಶಾಸಕ ಸುರೇಶ್‍ಬಾಬು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಕಲ್ಲೇಶ್, ರಾಮಚಂದ್ರಪ್ಪ, ಗೋಡೆಕೆರೆ, ನಡುವನಹಳ್ಳಿ,ಬ್ಯಾಡರಹಳ್ಳಿ,ನಾಗೇನಹಳ್ಳಿ ಗ್ರಾಪಂಗಳ ಅಧ್ಯಕ್ಷರು ಮತ್ತಿತರರಿದ್ದರು.