ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂ. ಗೋಲ್‍ಮಾಲ್ ಪ್ರಕರಣ ಸಿಐಡಿ ತನಿಖೆಗೆ
ಶಿವಮೊಗ್ಗ, ಆ. 25: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಕಿಗೆ ಬಂದಿರುವ ಕೋಟ್ಯಾಂತರ ರೂ. ಗೋಲ್‍ಮಾಲ್ ಪ್ರಕರಣವನ್ನು ಸಿಐಡಿ ತನಿಖೆಗೊಪ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಈ ಹಗರಣದ ತನಿಖೆಯೀಗ ಹೊಸ ತಿರುವು ಪಡೆದುಕೊಂಡಿದೆ.
ಈ ಹಗರಣದ ಕುರಿತಂತೆ ತೀರ್ಥಹಳ್ಳಿಯ ಆಗುಂಬೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 420, 408 ರ ಅಡಿ ಎಫ್‍ಐಆರ್ ದಾಖಲಾಗಿತ್ತು. ರಾಜ್ಯ ಪೊಲೀಸ್ ಮಹಾ ನಿದೇರ್ಶಕ ರೂಪಕ್ ಕುಮಾರ್ ದತ್ತಾರವರು ಕಳೆದ ಆಗಸ್ಟ್ 18 ರಂದು ಸಿಐಡಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ತಕ್ಷಣವೇ ತನಿಖಾಧಿಕಾರಿ ನೇಮಕ ಮಾಡುವಂತೆ ಸಿಐಡಿಗೆ ಸೂಚಿಸಿದ್ದಾರೆ.
ಯಾವುದೇ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿನ ಅವ್ಯವಹಾರದ ಮೊತ್ತ ಕೋಟಿ ರೂ. ದಾಟಿದ್ದರೆ ಅಂತಹ ಪ್ರಕರಣಗಳನ್ನು ಕಡ್ಡಾಯವಾಗಿ ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಈ ಹಿಂದೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಅದರಂತೆ ಹೊನ್ನೇತಾಳು ಸಹಕಾರ ಸಂಘದಲ್ಲಿ ಸರಿಸುಮಾರು 3 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ನಿಯಾಮಾನುಸಾರ ಸಿಐಡಿ ತನಿಖೆಗೊಪ್ಪಿಸಿದೆ ಎಂದು ಹೇಳಲಾಗುತ್ತಿದೆ.
ಅವ್ಯವಹಾರ: ಹೊನ್ನೇತಾಳು ಸಹಕಾರ ಸಂಘದಲ್ಲಿ 2002 ರಿಂದ 2016 ರವರೆಗಿನ ವಹಿವಾಟಿನಲ್ಲಿ ಅವ್ಯವಹಾರ ನಡೆದಿರುವ ಅಂಶ ಬೆಳಕಿಗೆ ಬಂದಿತ್ತು. ಹಾಗೆಯೇ 2012 ರಲ್ಲಿ ರಾಜ್ಯ ಸರ್ಕಾರದ ಸಾಲ ಮನ್ನಾ, ಸಂಘದ ಸ್ವಯಂ ಆದಾಯ ಸೇರಿದಂತೆ ಅನೇಕ ಬಾಬ್ತಿನಡಿ ಹಣ ದುರುಪಯೋಗ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು.
ಈ ಕುರಿತಂತೆ ಕಳೆದ ವರ್ಷ ಕೆಲ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದರು. ಹೊನ್ನೇತಾಳು ಸಹಕಾರಿ ಸಂಘದಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರು. ಈ ನಡುವೆ ಸಹಕಾರಿ ಇಲಾಖೆಯು ಆತಂರಿಕ ತನಿಖೆಗೆ ಕ್ರಮಕೈಗೊಂಡಿತ್ತು.
ಷಡ್ಯಂತ್ರ: ಇದೆಲ್ಲದರ ನಡುವೆಯೇ ಕೆಲ ಪ್ರಭಾವಿ ರಾಜಕಾರಣಿಗಳು, ಸಹಕಾರಿ ಮುಖಂಡರು ಹೊನ್ನೇತಾಳು ಸಹಕಾರ ಸಂಘದ ಗೋಲ್‍ಮಾಲ್ ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದರು. ಸಹಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಸಹಕಾರಿ ಇಲಾಖೆಯು ಕೂಡ ಸರಿಯಾಗಿ ತನಿಖೆ ನೆಡಸದಿರುವ ಆರೋಪ ಕೇಳಿಬಂದಿತ್ತು.
ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆ ಸಹಕಾರಿ ಇಲಾಖೆಯು ಸಹಕಾರಿ ಸಂಘಗಳ ಕಾಯ್ದೆ 159 ಕಲಂ 64 ರ ಅಡಿ ವಿಚಾರಣೆ ನಡೆಸಲಾರಂಭಿಸಿತ್ತು. ಈ ಕುರಿತಂತೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಅದಿಕೃತ ದೂರು ಕೂಡ ದಾಖಲಾಗಿತ್ತು.