ಶಿವಮೊಗ್ಗ : ಹೆಚ್ಚುತ್ತಿರುವ ಜೂಜಾಟಕ್ಕೆ ಕಡಿವಾಣ ಹಾಕಲು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎಂ.ಸುರೇಶ್‍ಬಾಬು ಆಗ್ರಹ
ಶಿವಮೊಗ್ಗ, ಆ. 26: ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಓ.ಸಿ. ಮತ್ತೀತರ ಜೂಜಾಟ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜಿ.ಎಂ.ಸುರೇಶ್‍ಬಾಬುರವರು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ಓ.ಸಿ. ಮತ್ತೀತರ ಜೂಜಾಟವು ನಿಯಂತ್ರಣದಲ್ಲಿತ್ತು. ಆದರೆ ಇತ್ತೀಚೆಗೆ ನಗರದ ಕೆಲವೆಡೆ ರಾಜಾರೋಷವಾಗಿ ಜೂಜಾಟ ನಡೆಯುತ್ತಿದೆ. ಜೂಜಾಟದಲ್ಲಿ ತೊಡಗಿರುವವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಹದಿಹರಿಯದವರು ಕೂಡ ಜೂಜಾಟಕ್ಕೆ ಬಲಿಯಾಗುತ್ತಿದ್ದಾರೆ. ಬಡ, ಮಧ್ಯಮ ವರ್ಗದ ಕೆಲವರು ತಾವು ದುಡಿದ ಹಣವನ್ನೆಲ್ಲ ಜೂಜಾಟಕ್ಕೆ ವ್ಯಯಿಸುತ್ತಿದ್ದಾರೆ. ಇದರಿಂದ ಕುಟುಂಬಗಳಲ್ಲಿ ನೆಮ್ಮದಿಯ ವಾತಾವರಣವಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಓ.ಸಿ. ಸೇರಿದಂತೆ ಎಲ್ಲ ರೀತಿಯ ಜೂಜಾಟ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಬೇಕು. ಇದಕ್ಕಾಗಿ ಪ್ರತ್ಯೇಕ ಪೊಲೀಸ್ ತಂಡ ರಚನೆ ಮಾಡಿ, ನಿರಂತರ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಹಾಗೆಯೇ ಜೂಜಾಟದಲ್ಲಿ ತೊಡಗಿದರೆ ಕಾನೂನು ರೀತ್ಯ ವಿಧಿಸಬಹುದಾದ ಶಿಕ್ಷೆ, ದಂಡ ಹಾಗೂ ದಾಖಲಿಸಬಹುದಾದ ಕೇಸ್‍ಗಳ ಬಗ್ಗೆಯೂ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಜಿ.ಎಂ.ಸುರೇಶ್‍ಬಾಬುರವರು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ.