ಭೋವಿ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯ ವಾಹಿನಿಗೆ ತರಬೇಕು: ಸೀತರಾಮ್
ಹನೂರು, ಆ.26: ಸಿಎಂ ಸಿದ್ದರಾಮಯ್ಯ ಸರ್ಕಾರ ಪ್ರಥಮ ಭಾರಿಗೆ ಕರ್ನಾಟಕದ ಎಲ್ಲಾ ತಾಲೂಕುಗಳಲ್ಲಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡುವ ಅವಕಾಶವನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ನಮ್ಮ ಭೋವಿ ಜನಾಂಗ ಸಂಘಟಿತರಾಗಬೇಕು ಎಂದು ರಾಜ್ಯದ ಪ್ರತೇಕ ಭೋವಿ ನಿಗಮ ಮಂಡಳಿಯ ಅಧ್ಯಕ್ಷ ಸೀತರಾಮ್ ತಿಳಿಸಿದರು.
ಹನೂರು ಪಟ್ಟಣದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಭೋವಿ ಯುವ ವೇದಿಕೆ ಚಾಮರಾಜನಗರ ವತಿಯಿಂದ ಆಯೋಜಿಸಿದ್ದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಘಟಕಗಳ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮೇಶ್ವರ ಜಯಂತಿಯನ್ನು ಕೇವಲ ನಾಲ್ಕು ಕಡೆಗಳಲ್ಲಿ ವಿಂಗಡಣೆ ಮಾಡಿ ಆಚರಣೆ ಮಾಡಲು ಮಾತ್ರ ಅವಕಾಶವಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರಾಜ್ಯದ ಎಲ್ಲಾ 174 ತಾಲೂಕುಗಳಲ್ಲಿಯೂ ಆಚರಣೆಗೆ ಆದೇಶ ಕೊಟ್ಟಿದೆ ಎಂದು ಹೇಳಿದರು.
ರಾಜ್ಯ ಸರಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕ ಮಾಡಿ ನಮ್ಮ ಭೋವಿ ಜನಾಂಗದ ಶ್ರೆಯೋಭಿವೃದ್ಧಿಗೆ ಶ್ರಮಿಸಿದೆ. ಸರ್ಕಾರದಿಂದ ಕುರಿ, ಕೋಳಿ ಸಾಗಾಣಿಕೆಗಾಗಿ 40 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಅಲ್ಲದೆ, ಜಮೀನು ಇಲ್ಲದ ಸಮುದಾಯದವರಿಗೆ 2 ಎಕರೆ ನೀಡಲು ನಿಗಮಕ್ಕೆ ಸರ್ಕಾರ 50 ರಿಂದ 60 ಕೋಟಿ ರೂ. ಅನುದಾನ ನೀಡಿದೆ. ಇದನ್ನು ನಮ್ಮ ಜನಾಂಗದವರು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ವಿದ್ಯಾವಂತರನ್ನಾಗಿಸಿ ಮುಖ್ಯ ವಾಹಿನಿಗೆ ತನ್ನಿ ಎಂದು ಕರೆ ನೀಡಿದರು.
ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಅಧ್ಯಕ್ಷ ಕೋಟೆಶ್ರೀ ಮಾತನಾಡಿ, ಭೋವಿ ಜನಾಂಗವು ರಾಜಕೀಯ, ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕವಾಗಿ ಹಿಂದುಳಿದ್ದಿದ್ದಾರೆ. ಇದಕ್ಕಾಗಿ ಹೋರಾಟ ಮಾಡಿ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ನಾರಾಯಣ್ , ಮಲ್ಲಣ್ಣ, ವಿಜಯ್ ಕುಮಾರ್, ಮೈಸೂರು ಗೋವಿಂದ ರಾಜಸ್ವಾಮಿ, ದೊಮ್ಮನಗದ್ದೆ ರಾಜು, ಕೃಷ್ಣ ಕಾಳಿಯಣ್ಣ, ರಘು, ವೆಂಕಟೇಶ್ , ಲಿಂಗೇಗೌಡ, ಬಸವರಾಜು, ಮೂರ್ತಿ ಮತ್ತಿತರರಿದ್ದರು