×
Ad

ಸೌಹಾರ್ದೆತೆಯೆಂಬ ಬೀಜ ಬಿತ್ತುವ ಕೆಲಸ ಪ್ರತೀ ಮನೆಗಳಲ್ಲಿ ನಡೆಯಬೇಕು: ವಿಶ್ವನಾಥ್ ರೈ

Update: 2017-08-27 19:18 IST

ಮೂಡಿಗೆರೆ, ಆ.27: ಎಲ್ಲಾ ಜಾತಿಯ ಜನರನ್ನು ಯಾವುದೇ ಭೇದ ಭಾವ ತೋರದೆ ಹೊತ್ತಿರುವ ಭಾರತಾಂಬೆಯು ಸದಾ ನಗುತ್ತಿರಬೇಕೆಂದರೆ, ಈ ದೇಶದಲ್ಲಿ ಸೌಹಾರ್ದೆತೆಯಂತಹ ಮುಖ್ಯ ಸಂದೇಶವನ್ನು ಪ್ರತಿಯೊಬ್ಬ ಭಾರತೀಯನೂ ಸಾರಬೇಕಾಗಿದೆ ಎಂದು ವಿ.ಎಸ್.ಶಾಲೆಯ ಆಡಳಿತಾಧಿಕಾರಿ ವಿಶ್ವನಾಥ್ ರೈ ತಿಳಿಸಿದರು.

ಅವರು ಪಟ್ಟಣದ ಜೆ.ಎಂ.ರಸ್ತೆಯಲ್ಲಿ ಸರ್ವಧರ್ಮ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮನ್ವಯ ಪ್ರಶಸ್ತಿ-2017 ಪಡೆದು ಮಾತನಾಡಿದರು.

ಭಾರತ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲಾ ಧರ್ಮವನ್ನು ಗೌರವಿಸಬೇಕು. ಇದು ಮಹಾತ್ಮ ಗಾಂಧೀಜಿಯವರ ಕನಸಾಗಿದ್ದು, ಅದನ್ನು ನನಸು ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕಾಗಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಮನಸ್ಸಿನಲ್ಲಿ ಸೌಹಾರ್ದೆತೆ ಎಂಬ ಬೀಜ ಬಿತ್ತಿವ ಕೆಲಸ ಮಾಡಿದರೆ ಉತ್ತಮ ಸಮಾಜ ತಾನಾಗಿಯೇ ನಿರ್ಮಾಣಗೊಳ್ಳುತ್ತದೆ ಎಂದರು.

ಎಂಇಎಸ್ ಶಾಲೆಯ ಮುಖ್ಯಸ್ಥ ಎಂ.ಎಸ್.ಹರೀಶ್ ಮಾತನಾಡಿ, ನಮ್ಮ ಧರ್ಮವನ್ನು ಗೌರವಿಸುವುದರ ಜೊತೆಗೆ ಎಲ್ಲಾ ಧರ್ಮವನ್ನು ಗೌರವಿಸಬೇಕು. ದೇಶ ಕಾಯುವುದು ಕೇವಲ ಸೈನಿಕರ ಕೆಲಸ ಮಾತ್ರವಲ್ಲ. ಈ ದೇಶದಲ್ಲಿರುವ ಎಲ್ಲಾ ಭಾರತೀಯರೂ ತಾನೊಬ್ಬ ಸೈನಿಕನೆಂಬ ಮನೋಭಾವನೆ ಮೂಡಿಸಿಕೊಳ್ಳಬೇಕು. ಆಗ ಮಾತ್ರ ಭಾರತ ಮಾತೆಗೆ ಗೌರವ ನೀಡುವುದರ ಜೊತೆಗೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಪತ್ರಕರ್ತ ಕಿರುಗುಂದ ಅಬ್ಬಾಸ್ ಮಾತನಾಡಿ, ಒಬ್ಬ ಮಾನವನನ್ನು ಸತ್ತ ನಂತರವೂ ನೆನಪಿಸಿಕೊಳ್ಳಬೇಕೆಂದರೆ ಆ ಮಾನವ ಸೌಹಾರ್ದತೆಯಿಂದ ಬಾಳಿದರೆ ಮಾತ್ರ ಸಾಧ್ಯ. ಸರ್ವಧರ್ಮವನ್ನು ಒಂದುಗೂಡಿಸುವ ಕೆಲಸವನ್ನು ಕೆಲವೇ ಪ್ರದೇಶಗಳಲ್ಲಿ ಸೀಮಿತವಾಗಬಾರದು. ಸೌಹಾರ್ಧತೆಯನ್ನು ಒಂದಾಗಿ ಕಟ್ಟಲು ಭಾರತದ ಮೂಲೆ ಮೂಲೆಗಳಲ್ಲಿ ನಡೆಯಬೇಕೆಂದರು.

ಈ ವೇಳೆ ವಿಎಸ್ ಶಾಲೆಯ ಆಡಳಿತಾಧಿಕಾರಿ ವಿಶ್ವನಾಥ್ ರೈಗೆ ಸಮಿತಿಯಿಂದ ಸಮನ್ವಯ ಪ್ರಶಸ್ತಿ-2017 ನೀಡಿ ಗೌರವಿಸಲಾಯಿತು. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಲಾಭಾರತಿ, ದ್ವಿತೀಯ ಸ್ಥಾನ ಸುನೀಲ್ ತಂಡ, ತೃತೀಯ ಸ್ಥಾನ ಹೈಡೆನ್ ಗ್ರೂಪ್ಸ್ ಪಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಎ.ಎಂ.ಮಹೇಶ್ ವಹಿಸಿದ್ದರು. ಎಚ್.ಪಿ.ಹರೀಶ್, ಸಮಿತಿಯ ಪುಟ್ಟರಾಜು, ಹಾ.ಬಾ.ಮಂಜು ಮತ್ತಿತರರು ಉಪಸ್ಥಿತರಿದ್ದರು. ಐವಿಆರ್ ಪಿಂಟೋ ಪ್ರಾರ್ಥಿಸಿದರೆ, ಮಲ್ಲೇಶ್ ಸ್ವಾಗತಿಸಿದರು. ಚಂದ್ರೇಶ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News