ಗುಂಪು ಹಿಂಸಾ ಹತ್ಯೆಗೆ ಖಂಡನೆ : ಎಸ್‍ಡಿಪಿಐಯಿಂದ ಮಾನವ ಸರಪಳಿ
ಮಡಿಕೇರಿ, ಆ.27 : ಗೋವಿನ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಎಂಬ ಘೋಷಣೆಯೊಂದಿಗೆ ಎಸ್‍ಡಿಪಿಐ ಪಕ್ಷ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಸಮಾರೋಪದ ಅಂಗವಾಗಿ “ಮನೆಯಿಂದ ಹೊರಗೆ ಬನ್ನಿ” ಎಂಬ ಸಂದೇಶದೊಂದಿಗೆ ನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಗುಂಪು ಹತ್ಯೆ ಮತ್ತು ಗೋವಿನ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹತ್ಯೆಯಾದವರ ಮುಖವಾಡ ಧರಿಸಿ ಕೈಗೆ ಕಪ್ಪು ಪಟ್ಟಿ ಕಟ್ಟಿ ಮಾರುಕಟ್ಟೆ ಬಳಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಮಾನವ ಸರಪಳಿ ರಚಿಸಲಾಯಿತು.
ಶಾಂತಿಗಾಗಿ ಒಂದಾಗೋಣ, ಆತ್ಮ ರಕ್ಷಣೆ ಅಪರಾಧವಲ್ಲ, ಮನೆಯಿಂದ ಹೊರಗೆ ಬನ್ನಿ ಎಂಬ ಫಲಕವನ್ನು ಹಿಡಿದು 20 ನಿಮಿಷಗಳ ಕಾಲ ಮೌನವಾಗಿ ನಿಲ್ಲುವುದರ ಮೂಲಕ ಹಿಂಸೆಯನ್ನು ವಿರೋಧಿಸಿದರು.
ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಗೋವಿನ ಹೆಸರಿನಲ್ಲಿ ಭಾವನಾತ್ಮಕವಾಗಿ ಹಿಂದೂ ಮತ್ತು ಮುಸಲ್ಮಾನರನ್ನು ವಿಭಜಿಸುವ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರ ರಾಜಕೀಯ ಷಡ್ಯಂತ್ರವನ್ನು ರೂಪಿಸುತ್ತಿವೆ ಎಂದು ಆರೋಪಿಸಿದರು. ದೇಶದಲ್ಲಿ ಗೋವಿನ ಹೆಸರಿನಲ್ಲಿ 39 ಗುಂಪು ಹತ್ಯೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಗುಂಪು ಹಿಂಸೆಯನ್ನು ಸಾಂವಿಧಾನಿಕವಾಗಿ ಪ್ರತಿರೋಧಿಸುವ ಸಂದೇಶವನ್ನು ಈ ಅಭಿಯಾನದ ಮೂಲಕ ನೀಡಲಾಗುತ್ತಿದೆ ಎಂದರು.
ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಖತ್ ಅಲಿ, ನಗರಸಭಾ ಸದಸ್ಯ ಮನ್ಸೂರ್, ಪ್ರಮುಖರಾದ ನೂರುದ್ದೀನ್, ಇದ್ರೀಸ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.