ಪ್ರಾಮಾಣಿಕ ಅಧಿಕಾರಿಗಳ ತಲೆದಂಡವನ್ನು ರಾಜ್ಯ ಸರಕಾರ ಮಾಡುತ್ತಿದೆ: ಬಿ.ಜೆ. ಪುಟ್ಟಸ್ವಾಮಿ
ಕಡೂರು, ಆ.27: ಪ್ರಾಮಾಣಿಕ ಅಧಿಕಾರಿಗಳ ತಲೆದಂಡವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.
ಅವರು ಭಾನುವಾರ ಪಟ್ಟಣದ ಬಿಜಿಎಸ್ ಶಾಲಾ ಆವರಣದಲ್ಲಿ ಜಿ.ಕೆ.ಗಿರೀಶ್ ಉಪ್ಪಾರ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿದರು.
ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್. ಮೇಘರಿಕ್ ಅವರು ಸರ್ಕಾರದ ಮಾತನ್ನು ಕೇಳಲಿಲ್ಲ ಎಂಬ ದುರುದ್ದೇಶದಿಂದ ಅವರನ್ನು ಕೇವಲ ಒಂದೇ ತಿಂಗಳಲ್ಲಿ ಸ್ಥಾನ ಪಲ್ಲಟ ಮಾಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ದೂರಿದರು.
ಮೈಸೂರಿನಲ್ಲಿ ದಕ್ಷ ಆಡಳಿತ ನೀಡಿದ ಜಿಲ್ಲಾಧಿಕಾರಿ ರೇಷ್ಮಾ, ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮ್ಯಾಥ್ಯ್ ಬಹುಕೋಟಿ ಹಗರಣಗಳ ಬಗ್ಗೆ ವರಧಿ ನೀಡಿದ ಹಿನ್ನೆಲೆಯಲ್ಲಿ ಸಾಕ್ಷಿ ನಾಶ ಪಡಿಸಲು ಅಧಿಕಾರಿಗಳನ್ನು ಬೇರೆ ಸ್ಥಳಗಳಿಗೆ ಎತ್ತಂಗಡಿ ಮಾಡಿದ ಮೂರ್ಖ ಸರ್ಕಾರ ಇದು ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆ ನೀಡಲು ನೇರವಾಗಿ ಉತ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಆದರೆ ಅವರನ್ನು ಮೂಲೆಗುಂಪು ಮಾಡಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಎಲ್ಲಾ ಪ್ರಮುಖ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ನೀಡುತ್ತಿರುವುದು ಕುಚ್ಯೋದ್ಯದ ಸಂಗತಿ ಎಂದರು.
ಕೇಂದ್ರದ ಮಾಜಿ ಸಚಿವೆ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ರೇಣುದೇವಿ ಮಾತನಾಡಿ, ಜನಸಾಮಾನ್ಯರಿಗೆ ನೀರು ಬಹುಮುಖ್ಯ ಮೂಲಭೂತ ಅಗತ್ಯಗಳಲ್ಲಿ ಒಂದು ಅಂತಹ ನೀರನ್ನು ನೀಡುತ್ತಿರುವ ಈ ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು ಅಭಿನಂದನಾರ್ಯ ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಶ್ರೀ ಪುರೂಶೋತ್ತಮಾನಂದ ಪುರಿ ಸ್ವಾಮಿ ಮಾತನಾಡಿ, ಈ ಉದ್ಯೋಗ ಮೇಳ ಒಂದು ಯಶಸ್ವಿ ಕಾರ್ಯಕ್ರಮ ಇಂದು ಇಲ್ಲಿ ಆಯ್ಕೆಯಾದ ಜನರಿಗೆ ಅವರು ಸಂಬಂಧಪಟ್ಟ ಕಂಪೆನಿಗಳಲ್ಲಿ ಕೆಲಸ ಆರಂಭಿಸುವವರೆಗೆ ಇದರ ನೇತೃತ್ವ ವಹಿಸಿದ ಗಿರೀಶ್ ಜವಾಬ್ದಾರಿ ನಿರ್ವಹಿಸಲಿ ಎಂದು ಸಲಹೆ ನೀಡಿದರು.
ಮತ್ತೋರ್ವ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮಿ ಮಾತನಾಡಿ, ಗಿರೀಶ್ ಉಪ್ಪಾರ ಅವರು ತಮ್ಮ ಈ ಶಾಲೆಯೊಳಗೆ ಉಚಿತವಾಗಿ ಕೊಳವೆಬಾವಿಯನ್ನು ಕೊರೆಸಿ ಶುದ್ಧ ನೀರಿನ ಘಟಕ ಅಳವಡಿಸಿ ಮಕ್ಕಳಿಗೆ ಉಪಯುಕ್ತವಾಗುವ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿಹಾರ ಪ್ರದೇಶ ಬಿಜೆಪಿ ಅಧ್ಯಕ್ಷ ಜಯಂತ್ ಚೌವ್ಹಾನ್, ಬೆಂಗಳೂರಿನ ಉದ್ಯಮಿ ಅನಿಲ್ ಜೈನ್, ಶೈಕ್ಷಣಿಕ ಸಲಹೆಗಾರ ಹರಿಬಾಬು, ಶ್ರಮರತ್ನ ಪ್ರಶಸ್ತಿ ವಿಜೇತ ಡಾ. ನಾಗರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ. ತಿಪ್ಪೇಶ್, ಬಿಜೆಪಿ ಮುಖಂಡ ಕೆ.ಎಚ್. ಶಂಕರ್, ಪುರಸಭೆ ಉಪಾಧ್ಯಕ್ಷ ಸಿ.ರಾಜೇಶ್ ಉಪಸ್ಥಿತರಿದ್ದರು.