ಕಡೂರು: ಕೆನರಾ ವಲಯ ಮಟ್ಟದ ಕ್ರೀಡಾಕೂಟ
ಕಡೂರು, ಆ. 27: ಕ್ರೀಡಾಕೂಟಗಳು ಮಾನಸಿಕ ಸಮತೋಲನಕ್ಕೆ ದಾರಿಯಾಗುತ್ತವೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಎಂ. ಪುಟ್ಟಪ್ಪ ಹೇಳಿದರು.
ಅವರು ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೆನರಾ-1 ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಕ್ರೀಡಾಕೂಟವನ್ನು ಉದ್ಟಾಟಿಸಿ ಮಾತನಾಡಿದರು.
ಸರ್ಕಾರ ಇಂತಹ ಕ್ರೀಡಾಕೂಟಗಳ ಆಯೋಜನೆಗೆ ನೀಡುತ್ತಿರುವ ಹಣ ಯಾವುದಕ್ಕೂ ಸಾಲಾದು ಆಯೋಜಕರು ಅನಿವಾರ್ಯವಾಗಿ ದಾನಿಗಳ ಮೊರೆ ಹೋಗಬೇಕು. ಇದು ಶಿಕ್ಷಕರಿಗೆ ಮುಜುಗರದ ವಿಷಯ ಎಂದರು.
ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಂ. ಹರೀಶ್ ಮಾತನಾಡಿ, ತೀರ್ಪುಗಾರರು ಇಂತಹ ಕ್ರೀಡಾಕೂಟಗಳಲ್ಲಿ ಮಕ್ಕಳಿಗೆ ಅನ್ಯಾಯವಾಗದ ರೀತಿ ತೀರ್ಪು ನೀಡಬೇಕು. ಅಲ್ಲದೆ ಮಕ್ಕಳು ಸೋಲು-ಗೆಲುವನ್ನು ಬದಿಗಿಟ್ಟು ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು. ಸೋತ ಮಕ್ಕಲು ನಿರಾಶರಾಗುವ ಅಗತ್ಯವಿಲ್ಲ. ಗೆದ್ದ ಮಕ್ಕಳು ಬೀಗುವ ಅಗತ್ಯವೂ ಇಲ್ಲ ಕ್ರೀಡೆ ಮುಗಿದ ಮೇಲೆ ಆ ಗುಂಗಿನಿಂದ ಹೊರಬನ್ನಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ವಹಿಸಿದ್ದರು. ಉಪಾಧ್ಯಕ್ಷ ಶ್ರೀನಿವಾಸ್, ಅತಿಥೇಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಎಸ್.ರಮೇಶ್‍ನಾಯ್ಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹೇಮ ಉಪಸ್ಥಿತರಿದ್ದರು.