ಹಾಸನ : ಜನಪ್ರಿಯ ಆಸ್ಪತ್ರೆ ವೈದ್ಯರು, ಸಿಬ್ಬಂದಿಯಿಂದ ನಗರ ಸ್ವಚ್ಛತೆ
ಹಾಸನ,ಆ.27: ಮೂರನೇ ವರ್ಷದ ಗೌರಿ-ಗಣೇಶ ಹಬ್ಬದ ಅಂಗವಾಗಿ ಜನಪ್ರಿಯ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ರವಿವಾರ ನಗರ ಸ್ವಚ್ಛತೆ ಕಾರ್ಯ ಕೈಗೊಂಡರು.
ಜನಪ್ರಿಯ ಆಸ್ಪತ್ರೆ ಮುಖ್ಯಸ್ಥರು ಹಾಗೂ ವೈದ್ಯರು ಅಬ್ದುಲ್ ಬಷೀರ್ ಸುದ್ದಿಗಾರರೊಂದಿಗೆ ಮಾತನಾಡಿ, ಗೌರಿ-ಗಣೇಶವನ್ನು ಆಸ್ಪತ್ರೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಈ ಹಿನ್ನಲೆಯಲ್ಲಿ ಇಂತಹ ಸ್ವಚ್ಛತೆ ಕಾರ್ಯವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಂಡವು ಕಾರ್ಯನಿರ್ವಹಿಸುತ್ತಿದೆ. ನಮ್ಮ ಸುತ್ತ ಮುತ್ತ ಸ್ವಚ್ಛತೆ ಇದ್ದರೇ ನಮ್ಮ ಮನಸ್ಸುಗಳು ಕೂಡ ಶುದ್ಧವಾಗಿರುತ್ತದೆ. ಸ್ವಚ್ಛತೆ ಎಂಬುದು ತಮ್ಮ ತಮ್ಮ ಮನೆ ಹಾಗೂ ಅಂಗಡಿ ಸುತ್ತ ಮುತ್ತ ಮಾಡಿಕೊಂಡರೇ ಸಾಕು ಇಡೀ ನಗರದಲ್ಲಿ ಉತ್ತಮ ವಾತವರಣ ನಿರ್ಮಿಸಬಹುದು ಎಂದರು.
ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಎಸೆಯುವ ಕಸ ರಸ್ತೆ ಮೇಲೆ ಬೀಳದೆ, ನಿಗದಿ ಮಾಡಿದ ಸ್ಥಳದಲ್ಲಿಯೇ ಹಾಕುವುದರ ಮೂಲಕ ಒಳ್ಳೆಯ ಗಾಳಿ ನಾವು ಪಡೆಯಬಹುದು. ವಾತವರಣ ನಿರ್ಮಲವಾಗಿದ್ದರೇ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು. ನಾವು ಇಂದು ಮಾಡುತ್ತಿರುವ ಸ್ವಚ್ಛತೆ ಇತರರಿಗೂ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರೂ ಸ್ವಚ್ಛತೆ ಬಗ್ಗೆ ನಿಗಾವಹಿಸುವಂತೆ ಇದೆ ವೇಳೆ ಕರೆ ನೀಡಿದರು.
ಗೌರಿ-ಗಣೇಶ ಹಬ್ಬದ ಅಂಗವಾಗಿ ಮದ್ಯಾಹ್ನ ಜನಪ್ರಿಯ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನದಾನವನ್ನು ನಡೆಸಲಾಯಿತು. ಸಾವಿರಾರು ಜನರು ಪಾಲ್ಗೊಂಡಿದ್ದರು.
ಸ್ವಚ್ಛತೆಯಲ್ಲಿ ಜನಪ್ರಿಯ ಆಸ್ಪತ್ರೆಯ ವೈದ್ಯರು ಹಾರೋನ್, ಅನೂಪ್ ಹಾಗೂ ಜನಪ್ರಿಯ ಆಸ್ಪತ್ರೆ ಛೇರ್ಮನ್ ಅಬ್ದುಲ್ ಬಷೀರ್ ಕುಟುಂಬ ಇತರರು ಪಾಲ್ಗೊಂಡಿದ್ದರು.