ಸಾಗರ: ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಪೌರ ಕಾರ್ಮಿಕರ ಬೀಳ್ಕೊಡುಗೆ ಕಾರ್ಯಕ್ರಮ
ಸಾಗರ, ಆ.27: ನಗರ ನಿರ್ವಹಣೆಯಲ್ಲಿ ಸಿಂಗಾಪುರ ಅತ್ಯಂತ ಅನುಕರಣೀಯವಾಗಿದೆ. ಇದನ್ನು ನಮ್ಮ ರಾಜ್ಯದ ಪೌರ ಕಾರ್ಮಿಕರು ವೀಕ್ಷಿಸಿ, ತಾವು ಕರ್ತವ್ಯ ನಿರ್ವಹಿಸುವ ನಗರಗಳಲ್ಲಿ ಅಳವಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ಸಿಂಗಾಪುರ ಅಧ್ಯಯನ ಪ್ರವಾಸಕ್ಕೆ ಕಳಿಸುತ್ತಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್ ತಿಳಿಸಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಶನಿವಾರ ಪೌರ ಕಾರ್ಮಿಕರ ಸಂಘದ ವತಿಯಿಂದ ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಪೌರ ಕಾರ್ಮಿಕರ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಂಗಾಪುರ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಹೊಂದಿದೆ. ಅಲ್ಲಿ ಕಸ ಸಂಗ್ರಹಣೆ, ವಿಂಗಡಣೆ, ಸಂಸ್ಕರಣೆ ಮತ್ತು ನಿರ್ವಹಣೆ ಬಗ್ಗೆ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕಸವನ್ನು ರಸವನ್ನಾಗಿಸುವ ಕಲೆ ಅಲ್ಲಿ ಸಾಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪೌರ ಕಾರ್ಮಿಕರಿಗೆ ಅಲ್ಲಿನ ಕಸ ನಿರ್ವಹಣೆ ಕುರಿತು ಅಧ್ಯಯನ ಪ್ರವಾಸ ಏರ್ಪಡಿಸಿದೆ. ಅಲ್ಲಿ ನೀವು ಕಲಿತಿದ್ದನ್ನು ಸ್ಥಳೀಯವಾಗಿ ಅಳವಡಿಸಿಕೊಳ್ಳುವ ಜೊತೆಗೆ ಅದನ್ನು ನಿಮ್ಮ ಸಹವರ್ತಿಗಳಿಗೂ ಕಲಿಸುವಂತೆ ಆಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಕೆ.ನಾಗಪ್ಪ, ಇಷ್ಟು ವರ್ಷಗಳ ಕಾಲ ಪೌರಾಡಳಿತ ಇಲಾಖೆಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ವಿದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದರು. ಮೊದಲ ಬಾರಿಗೆ ಸಚಿವರಾದ ಆಂಜನೇಯ ಅವರು ಪೌರಾಡಳಿತ ಇಲಾಖೆಯ ಜೀವಾಳವಾಗಿರುವ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ ಕಲ್ಪಿಸಿರುವುದಕ್ಕೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ವಿಶೇಷವಾಗಿ ಪೌರ ಕಾರ್ಮಿಕರ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಗೃಹಭಾಗ್ಯ, ಗುತ್ತಿಗೆ ಕಾರ್ಮಿಕರ ಖಾಯಮಾತಿ, ಆರೋಗ್ಯ ತಪಾಸಣೆ, ಹೆಪಟೈಟಿಸ್ ಬಿ ಲಸಿಕೆ ಶಿಬಿರ, ಉಪಹಾರ ಭಾಗ್ಯ ಹೀಗೆ ಅನೇಕ ಯೋಜನೆಯನ್ನು ಪೌರ ಕಾರ್ಮಿಕರ ಏಳಿಗೆಗೆ ಕೈಗೊಂಡಿದೆ. ಪೌರ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಈ ವೇಳೆ ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಪೌರ ಕಾರ್ಮಿಕರಾದ ಮಂಜುನಾಥ್, ಮಾರಪ್ಪ, ವೇಲಾಯುಧನ್, ಚೆಲುವ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರ ಪ್ರಭಾಕರ್, ನಗರಸಭೆ ಸದಸ್ಯರಾದ ಉಷಾ ಎನ್., ಸಂತೋಷ್ ಆರ್. ಶೇಟ್, ನಿಸಾರ್ ಅಹ್ಮದ್, ವ್ಯವಸ್ಥಾಪಕ ಸಂತೋಷ್ ಕುಮಾರ್, ಕಂದಾಯ ನಿರೀಕ್ಷಕ ಹೇಮಂತ್ ಮತ್ತಿತರರಿದ್ದರು. ಹಿರಿಯ ಆರೋಗ್ಯ ನಿರೀಕ್ಷಕ ಶೈಲೇಶ್ ಕಾರ್ಯಕ್ರಮ ನಿರ್ವಹಿಸಿದರು.