ಪರಿಸರ ರಕ್ಷಣೆಗೆ ಹಳ್ಳಿಯಿಂದಲೇ ಸಂಘಟಿತರಾಗಬೇಕು: ದಾಮೋದರ ನಾಯಕ್
ಸಾಗರ, ಆ.27: : ಹಿಂದೆ ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಶರಾವತಿ ಕಣಿವೆ ಪ್ರದೇಶದಲ್ಲಿ ದಟ್ಟವಾದ ಕಾಡು ಇತ್ತು. ಈಗ ಅರಣ್ಯ ಪೂರ್ಣ ನಾಶವಾಗಿರುವುದು ದುರಂತದ ಸಂಗತಿ ಎಂದು ಗೋವಾದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಫ್‍ಎಸ್ ಅಧಿಕಾರಿ ದಾಮೋದರ ನಾಯಕ್ ತಿಳಿಸಿದರು.
ತಾಲೂಕಿನ ನಾಗವಳ್ಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ನಾಗವಳ್ಳಿ ಗೆಳೆಯರ ಬಳಗ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಾನವನಿಂದ ಬೇರೆ ಬೇರೆ ಉದ್ದೇಶಕ್ಕೆ ಅರಣ್ಯ ನಾಶ ಹೆಚ್ಚುತ್ತಿದ್ದು, ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ಅರಣ್ಯ ರಕ್ಷಣೆ ಇಲಾಖೆಯದ್ದೋ, ಸರ್ಕಾರದ್ದೋ ಜವಾಬ್ದಾರಿ ಎಂದು ಸುಮ್ಮನೆ ಕುಳಿತು ಕೊಳ್ಳಬಾರದು. ಹಳ್ಳಿಯಿಂದಲೇ ಪರಿಸರ ರಕ್ಷಣೆಯ ಸಂಘಟಿತ ಪ್ರಯತ್ನ ನಡೆಯಬೇಕು. ಆಗ ನಗರ ಪ್ರದೇಶದಲ್ಲಿರುವವರು ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಎಚ್ಚೆತ್ತುಕೊಳ್ಳುತ್ತಾರೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ನಗರ ಪ್ರದೇಶದ ಜನರು ಅಲ್ಲಿ ಶುದ್ಧ ಗಾಳಿ, ಪರಿಸರ ಇಲ್ಲದೆ ಇರುವುದರಿಂದ ವಾಸ ಮಾಡಲು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಪರಿಸರ ಮತ್ತು ಮನುಷ್ಯನ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗದೆ ಹೋದಲ್ಲಿ ಭವಿಷ್ಯದ ಪೀಳಿಗೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಚಂದ್ರಣ್ಣ, ಶೋಭಾ, ಮಾಜಿ ಸದಸ್ಯ ಮಾರ್ಟಿನ್, ಪ್ರಮುಖರಾದ ದೇವೇಂದ್ರ, ವೆಂಕಟೇಶ್ ಹಾಜರಿದ್ದರು.