ಸಿದ್ದಾಪುರ: ನಕಲಿ ಬಾಬಾಗೆ ಗ್ರಾಮಸ್ಥರಿಂದ ಗೂಸಾ
ಸಿದ್ದಾಪುರ, ಆ.27: ಸಮೀಪದ ಹಾಲುಗುಂದ ಗ್ರಾ.ಪಂ ವ್ಯಾಪ್ತಿಯ ಕೊಂಡಗೇರಿಯಲ್ಲಿ ಕಳೆದ 3 ತಿಂಗಳಿನಿಂದ ಮಾಠ ಮಂತ್ರದೊಂದಿಗೆ ಜನರಿಗೆ ಸಮಸ್ಯೆಯಾಗಿದ್ದ, ನಕಲಿ ಬಾಬಾಗೆ ಗ್ರಾಮಸ್ಥರು ಗೂಸಾ ನೀಡಿ, ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ನಡೆದಿದೆ.
ಕೊಂಡಂಗೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತ ಯಾವ ಧರ್ಮದ ಜನರು ತನ್ನ ಬಳಿ ಬರುತ್ತಾರೋ ಅವರ ಧರ್ಮಕ್ಕೆ ಅನುಸಾರವಾಗಿ ತನ್ನ ವೇಷ ಬದಲಿಸಿಕೊಳ್ಳುತ್ತಿದ್ದ ಎನ್ನಲಾಗಿದ್ದು, ಮಧ್ಯರಾತ್ರಿಯಲ್ಲಿ ಮಹಿಳೆಯರನ್ನು ತನ್ನ ಸೇವಕರಾಗಿ ನೇಮಿಸಿ ಕೊಂಡಿದ್ದ ಎನ್ನಲಾಗಿದೆ.
ಈತನ ಚಟುವಟಿಕೆಗಳಲ್ಲಿ ಸಂಶಯಗೊಂಡ ಗ್ರಾಮಸ್ಥರು ರವಿವಾರ ಈತನ ಕೋಣೆಯೊಳಗೆ ನುಗ್ಗಿದಾಗ ಕತ್ತಲ ಕೋಣೆಯೊಂದರಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಗೂಸಾ ನೀಡಿ ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೇರಳ ನಿವಾಸಿಯಾಗಿರುವ ಈತನ ಮೇಲೆ ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದ್ದು, ಸಾದಾತ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಎ.ಎಂ ಸಾದಲಿ ಅನಧಿಕೃತ ಜ್ಯೋತಿಷ್ಯಾಲಯ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿ ಗ್ರಾ.ಪಂ ಗೆ ದೂರು ನೀಡಿದ ಹಿನ್ನಲೆ ಗ್ರಾ.ಪಂ ಮೂಲಕ ಈತನ ಕುರಿತು ವಿಚಾರಿಸಿ ಕ್ರಮ ಕೈಗೊಳ್ಳಬೇಕೆಂದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಈತನಿಗೆ ಗ್ರಾ.ಪಂ ಸದಸ್ಯರೋರ್ವ ಸಹಕಾರ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.