×
Ad

ದಾವಣಗೆರೆ: ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Update: 2017-08-27 21:59 IST

ದಾವಣಗೆರೆ, ಆ.27: ವೀರಶೈವ-ಲಿಂಗಾಯತ ಬೇರೆ ಬೇರೆಯಲ್ಲ ಎರಡು ಒಂದೇ. ಹೀಗಿರುವ ಗೊಂದಲ ಗುರುಪರಂಪರೆ ಮತ್ತು ವಿರಕ್ತ ಮಠಗಳ ಸ್ವಾಮೀಜಿಗಳದ್ದು. ಆದ್ದರಿಂದ ಸಮುದಾಯದ ಜನರು ಈ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು ಎಂದು ಹರ ಸೇವಾ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಉಮಾಪತಿ ಹೇಳಿದರು.

ಇಲ್ಲಿನ ರೇಣುಕಾ ಮಂದಿರದಲ್ಲಿ ಹರಸೇವಾ ಸಂಸ್ಥೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಇವರ ಸಹಯೋಗದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಠಾಧೀಶರು ತಮ್ಮ ವೈಯಕ್ತಿಕ ಪ್ರತಿಷ್ಠೆ ಬಿಡಬೇಕು. ವೀರಶೈವವೇ ಬೇರೆ, ಲಿಂಗಾಯಿತವೇ ಬೇರೆ ಎಂಬ ಚರ್ಚೆ, ಹೇಳಿಕೆ ಮತ್ತು ಘೋಷಣೆಗಳನ್ನು ಈ ಕೂಡಲೇ ನಿಲ್ಲಿಸಬೇಕು. ಎಲ್ಲರೂ ಒಂದಾಗಿ ಸ್ವತಂತ್ರ ವೀರಶೈವ ಲಿಂಗಾಯಿತ ಧರ್ಮಕ್ಕಾಗಿ ಹೋರಾಟ ಮಾಡಬೇಕು. ಇಡೀ ಜನಾಂಗದ ಒಳಿತಿಗಾಗಿ, ಒಗ್ಗಟ್ಟಿಗೆ ಶ್ರಮಿಸಬೇಕು ಎಂದ ಅವರು, ವ್ಯಕ್ತಿಗಿಂತ ಸಮಾಜ ದೊಡ್ಡದು. ಧರ್ಮ ಒಂದು ಗೂಡಿಸುವ ಕೆಲಸವಾಗಬೇಕು. ವೀರಶೈವ-ಲಿಂಗಾಯಿತ ಸಮಾಜ ಒಡೆಯುವ ಕೆಲಸ ಆಗಬಾರದು ಎಂದರು.

ನಮ್ಮ ಸಮಾಜದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಅಲಗ್ಲದೆ, ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಮಾಜ ಆಸ್ತಿಯಾಗಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಕೈಗಾರಿಕೋದ್ಯಮಿ ಐ.ಪಿ. ಮಲ್ಲಿಕಾರ್ಜುನ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳ ಭವಿಷ್ಯ ತಾಯಂದಿರ ಕೈಯಲ್ಲಿದೆ. ಮಹಿಳೆಯರು ಸಹ ಶಿಕ್ಷಣದಿಂದ ವಂಚಿತರಾಗಿಸಬೇಡಿ. ಮಹಿಳೆ ಶಿಕ್ಷಣ ಕಲಿತರೆ ಇಡೀ ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಈ ವೇಳೆ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಿ. ಚೈತ್ರ ಸೇರಿದಂತೆ ಎಸೆಸೆಲ್ಸಿ ಮತ್ತು ಪಿಯುಸಿ ಉತ್ತಮ ಅಂಕ ಪಡೆದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಎಸ್.ವಿ. ಚಂದ್ರಶೇಖರ್, ಎಸ್.ಕೆ. ಶ್ರೀಧರ್, ಉಪನ್ಯಾಸಕ ಮಲ್ಲಿಕಾರ್ಜನ್, ಕಸಾಪ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್, ಬಾದಾಮಿ ಕರಿಬಸಪ್ಪ, ಎಂ. ದೊಡ್ಡಪ್ಪ, ಮಂಜುನಾಥ ಪುರವಂತರ್, ಬಿ. ಪಾಲಾಕ್ಷಪ್ಪ, ಶ್ರೀಧರ್, ದಾವಳಗಿ ಬಕ್ಕಪ್ಪ, ಹದಡಿ ನಟರಾಜ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News