ಗೊಲ್ಲ ಜನಾಂಗ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು: ಎಸ್.ಪಿ.ಮುದ್ದಹನುಮೇಗೌಡ
ತುಮಕೂರು,ಆ.28: ಹಿಂದುಳಿದವರಲ್ಲಿ ಅತಿ ಹಿಂದುಳಿದಿರುವ ಗೊಲ್ಲ,ಯಾದವ ಜನಾಂಗದ ಏಳಿಗೆಗೆ ಜನಾಂಗದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರೆ ಮಾತ್ರ ಅವರು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾದ ಮುದ್ದಹನುಮೇಗೌಡ ಗೊಲ್ಲ ಜನಾಂಗದವರಿಗೆ ಕರೆ ನೀಡಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲ ಸಮುದಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಉತ್ತರ ಭಾರತದ ಬಿಹಾರ,ಉತ್ತರ ಪ್ರದೇಶ ಸೇರಿದಂತೆ 4-5 ಜಿಲ್ಲೆಗಳಲ್ಲಿ ಪ್ರಭಲವಾದ ರಾಜಕೀಯ ಶಕ್ತಿ ಹೊಂದಿರುವ ಯಾದವ ಸಮಾಜ ದಕ್ಷಿಣ ರಾಜ್ಯಗಳಲ್ಲಿ ಇನ್ನೂ ಪ್ರವರ್ಧಮಾನಕ್ಕೆ ಬೆಳೆಯಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬ ಯಾದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಸಮಾಜದ ಏಳ್ಗೆಯನ್ನು ಸಾಧಿಸಬಹುದು ಎಂದು ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್‍ಗೌಡ ಅವರು ಮಾತನಾಡಿ, ಯಾದವರು ತಮ್ಮಲ್ಲಿನ ಯಾದವೀ ಕಲಹಗಳನ್ನು ಬಿಟ್ಟು ರಾಜಕೀಯವಾಗಿ ಬೆಳೆದಾಗ ಮಾತ್ರ ಸಮುದಾಯಕ್ಕೆ ಪ್ರಗತಿ ಹಾದಿ ಸುಗಮವಾಗಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರದುರ್ಗದ ಕೃಷ್ಣ ಯಾದವಾನಂದ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಲತಾ ರವಿಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರೇಮಾ ಮಹಾಲಿಂಗಪ್ಪ, ಶೋಭಾ ಶಿವಣ್ಣ, ಕೆಎಂಎಫ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಮುಂತಾದವರು ಭಾಗವಹಿಸಿದ್ದರು.