ಭರತ್ ಕೊಲೆ ಪ್ರಕರಣ: ಏಳು ಆರೋಪಿಗಳ ಬಂಧನ
ನಾಗಮಂಗಲ, ಆ.28: ತಾಲೂಕಿನ ಕಾಚೇನಹಳ್ಳಿ ಬಳಿಯ ಜೋಡಿ ರಸ್ತೆಯಲ್ಲಿ ಆ.23 ರಂದು ನಡೆದಿದ್ದ ಬೆಂಗಳೂರಿನ ರಾಜಾಜಿನಗರದ ರೌಡಿ ಭರತ್‍ನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ನಾಗಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಧಿಕಾ, ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧಿಸಲಾಗಿರುವ ಏಳು ಆರೋಪಿಗಳ ಮೇಲೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ರೌಡಿ ಶೀಟರ್‍ಗಳಾಗಿದ್ದಾರೆ ಎಂದರು.
ನೆಲಮಂಗಲ ಬಳಿಯ ಡಾಭಾವೊಂದರಲ್ಲಿ ಈ ಎಲ್ಲ ಆರೋಪಿಗಳನ್ನು ಬಂಧಿಸಲಾಯಿತು. ಬೆಂಗಳೂರು ಮಾಗಡಿ ರಸ್ತೆಯ ಭುವನೇಶ್ವರಿ ನಗರದ ನಿವಾಸಿ ಜಯರಾಮು, ರವಿ ಉ.ಶೆಡ್ ರವಿ, ಜಾನಕಿರಾಮ ಅಲಿಯಾಸ್ ಜಾನಿ, ಎಂ.ಸತೀಶ ಅಲಿಯಾಸ್ ಮಚ್ಚಿ, ಕೆಪಿ ಅಗ್ರಹಾರದ ಶೇಖರ ಅಲಿಯಾಸ್ ಕುಳ್ಳು, ಮಹಾಲಕ್ಷ್ಮಿ ಲೇಔಟ್‍ನ ಎನ್.ಸತೀಶ ಅಲಿಯಾಸ್ ಕರಿಯಾ, ಬಸವೇಶ್ವರನಗರದ ಮಂಜುನಾಥ ಅಲಿಯಾಸ್ ಚೋಟು ಬಂಧಿತ ಆರೋಪಿಗಳು ಎಂದು ತಿಳಿಸಿದರು.
ಕೊಲೆಯಾದ ಭರತ್ ಎಂಬಾತ ಮತ್ತು ಜಯರಾಮು ಅವರ ಮೇಲೆ ಕೆಲ ತಿಂಗಳ ಹಿಂದೆ ಮನೆ ವಿಚಾರವಾಗಿ ಜಗಳ ನಡೆದು, ಭರತ್ ಎಂಬಾತನು ಜಯರಾಮುವಿಗೆ ಹೊಡೆದಿದ್ದ ಎನ್ನಲಾಗಿದೆ. ಈ ಹಳೆಯ ಸೇಡನ್ನು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಜಯರಾಮು, ಭರತ್‍ನ ಸ್ನೇಹಿತನಾದ ಮಂಜುನಾಥ್‍ನ ಸಹಾಯ ಪಡೆದಿದ್ದಾನೆ. ಭರತ್ ಮತ್ತು ಸ್ನೇಹಿತರಾದ ಮುನಿರಾಜು, ಮಂಜುನಾಥ, ಹರ್ಷಿತ್‍ನೊಂದಿಗೆ ಎರಡು ಬೈಕ್‍ಗಳಲ್ಲಿ ಆ.23 ರಂದು ಬೆಂಗಳೂರಿನಿಂದ ಮೇಲುಕೋಟೆಗೆ ನಾಗಮಂಗಲ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಮಂಜುನಾಥ ನೀಡುತ್ತಿದ್ದ ಮಾಹಿತಿಯಿಂದ ಎರಡು ಕಾರುಗಳಲ್ಲಿ ಹಿಂಬಾಲಿಸಿ ಬಂದಿದ್ದ ಆರೋಪಿಗಳು ಕಾಚೇನಹಳ್ಳಿ ಬಳಿಯ ಜೋಡಿ ರಸ್ತೆಯಲ್ಲಿ ಹಾಡು ಹಗಲಲ್ಲೇ ಮಾರಕಾಸ್ತ್ರಗಳಿಂದ ಭರತ್ ನನ್ನು ಕೊಚ್ಚಿ ಕೊಲೆಗೈದು ಕಾರಿನಲ್ಲಿ ಪರಾರಿಯಾಗಿದ್ದರು ಎಂದು ಅವರು ವಿವರಿಸಿದರು.
ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ಲಾವಣ್ಯ, ಸಿಪಿಐ ಡಿ.ಪಿ.ಧನರಾಜ್, ಪಿಎಸ್‍ಐಗಳಾದ ಬಿ.ಚಿದಾನಂದ್ ಮತ್ತು ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣ ಬೇಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭಾರ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಡಿ.ಪಿ.ಧನರಾಜ್, ಪಿಎಸ್‍ಐಗಳಾದ ಬಿ.ಚಿದಾನಂದ್. ಚಂದ್ರಶೇಖರ್, ಪ್ರಮೋದ್‍ಕುಮಾರ್, ಸಿಬ್ಬಂದಿಗಳಾದ ಬಿ.ಎಚ್.ಇಂದ್ರಕುಮಾರ್, ಸಿದ್ದರಾಜು, ವಜ್ರ ಮತ್ತು ಹನೀಫ್, ಇತರ ಸಿಬ್ಬಂದಿ ಉಪಸ್ಥಿತರಿದ್ದರು.