ಮದ್ದೂರು: ಅಪರ ಸಿವಿಲ್ ನ್ಯಾಯಾಲಯ ಉದ್ಘಾಟನೆ
ಮದ್ದೂರು, ಆ.28: ಪಟ್ಟಣದ ನ್ಯಾಯಾಲಯದಲ್ಲಿ ನೂತನವಾಗಿ 3 ಮತ್ತು 4ನೆ ಅಪರ ಸಿವಿಲ್ ಜೆಎಂಎಫ್ ಸಿ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ವಿಜಯಕುಮಾರಿ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರಿ ಅವರು, ನ್ಯಾಯಾಲಯಗಳಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆ ಇರುವುದು ತಿಳಿದು ಬಂದಿದೆ. ಈ ಸಮಸ್ಯೆನ್ನು ನಿವಾರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ವಕೀಲ ಮಾದೇಗೌಡ, ನ್ಯಾಯಾಧೀಶರು ಹೆಚ್ಚಾಗುತ್ತಿದ್ದಾರೆಯೇ ಹೊರತು ನಿರ್ವಹಣೆಗೆ ಸಿಬ್ಬಂದಿಗಳ ಕೊರತೆಯಿಂದ ಪ್ರಕರಣಗಳು ವಿಲೇವಾರಿಯಾಗಲು ವಿಳಂಬವಾಗುತ್ತಿದೆ ಎಂದು ವಿಷಾದಿಸಿದರು.
ಸಿಬ್ಬಂದಿ ಕೊರತೆ ನೀಗದ ಹೊರತು ಪ್ರಕರಣಗಳು ಇತ್ಯರ್ಥವಾಗುವುದಿಲ್ಲ. ಕೂಡಲೇ ಇದನ್ನು ಪರಿಗಣಿಸಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವುದರ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಅವರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಆರ್.ಪಿ. ಗೌಡ, ವರದರಾಜು, ಅಮೂಲ್ ಹೀರೇಕುಡೆ, ಸೋಮನಾಥ, ಸುಬ್ರಮಣ್ಯ, ತೃಪ್ತಿ ಡಿ. ಧರಣಿ, ವಕೀಲರ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಪುಟ್ಟಸ್ವಾಮಿ ಮತ್ತಿತರರು ಹಾಜರಿದ್ದರು.