×
Ad

ಯುವಪೀಳಿಗೆಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಹಿರಿಯರ ಮೇಲಿದೆ: ಕುಂದೂರು ಅಶೋಕ್

Update: 2017-08-28 22:32 IST

ಮೂಡಿಗೆರೆ, ಆ.28: ಅವಿಭಕ್ತ ಕುಟುಂಬ ವ್ಯವಸ್ಥೆ ಶಿಥಿಲಗೊಂಡು ನಶಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೌಟುಂಬಿಕ ವ್ಯವಸ್ಥೆ ಹಾದಿ ತಪ್ಪದಂತೆ ಜತನಮಾಡುವ ಮತ್ತು ಯುವಪೀಳಿಗೆ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಹಿರಿಯರ ಮೇಲೆ ಇದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅಭಿಪ್ರಾಯಿಸಿದರು.

ಅವರು ಜಿಕಸಾ ಮೂಡಿಗೆರೆ ಸಮೀಪದ ದುಂಡುಗ ಗ್ರಾಮದಲ್ಲಿ ಡಿ.ಬಿ.ಸುಬ್ಬೇಗೌಡರೊಂದಿಗೆ ಅವರ ಮನೆಯಲ್ಲಿ ಏರ್ಪಡಿಸಿದ್ದ “ಬದುಕು ಕಟ್ಟುವ ಬಗೆ” ಎಂಬ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದು ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಪ್ರೀತಿ, ಬಾಂಧವ್ಯ, ಆತ್ಮೀಯತೆ, ಕೂಡಿ ಬಾಳುವ ಸೊಗಡು ಮಾಯವಾಗುತ್ತಿದೆ. ಸಮಾಜಮುಖಿ ಚಿಂತನೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಡಿ.ಬಿ.ಸುಬ್ಬೇಗೌಡರ ಬದುಕು ನಮಗೆಲ್ಲಾ ಆದರ್ಶಪ್ರಾಯವಾದುದು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಎಂಎಲ್‍ಸಿ ಶ್ರೀಮತಿ ಮೋಟಮ್ಮ ಮಾತನಾಡಿ, ವ್ಯಕ್ತಿ ತಾನು ಬೆಳೆದುಬಂದ ಹಾದಿಯನ್ನು ಎಂದಿಗೂ ಮರೆಯಬಾರದು,. ತನ್ನ ಹೆಜ್ಜೆಗುರುತುಗಳ ಪ್ರಜ್ಞೆ ಸದಾ ಮನದಲ್ಲಿ ಜಾಗೃತವಾಗಿರಬೇಕು. ಸಮಾಜಕ್ಕೆ ತಾನು ಏನಾದರೂ ಒಳ್ಳೆಯ ಕೊಡುಗೆ ಕೊಡುವ ಚಿಂತನೆ ನಡೆಸಬೇಕು. ತಾನು ರಾಜಕೀಯ ಕ್ಷೇತ್ರದಲ್ಲಿ ಬೆಳಕಿಗೆ ಬರಲು ಡಿ.ಬಿ.ಸುಬ್ಬೇಗೌಡರು ಪ್ರಮುಖ ಕಾರಣಕರ್ತರು ಎಂದರು. ಭೂನ್ಯಾಯ ಮಂಡಳಿ ಅಧ್ಯಕ್ಷರಾಗಿ ಸಾವಿರಾರು ಭೂರಹಿತರಿಗೆ ಭೂಮಿಯನ್ನು ಕೊಡಿಸುವಲ್ಲಿ ಕಾಳಜಿ ವಹಿಸಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿಕೊಂಡರು.

 ಈ ವೇಳೆ ಪಿಸಿಎಆರ್ ಡಿ ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಸಾಹಿತಿಗಳಾದ ಡಿ.ಎಸ್.ಜಯಪ್ಪಗೌಡ, ಹಳೇಕೋಟೆ ರಮೇಶ್, ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಕಾರ್ಯದರ್ಶಿ ಶಾಂತಕುಮಾರ್, ಮೋಹನ್ ಲಾಲ್ ಜೈನ್, ಸುಂದರ ಬಂಗೇರ, ಡಿ.ಎಂ.ಶಂಕರ್, ಡಿ.ಎಸ್.ರಘು, ಡಿ.ಎಸ್.ರವಿ, ಪ್ರಸನ್ನ ಗೌಡಹಳ್ಳಿ, ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಸೂರಿ ಪ್ರಭು, ಉಪಾಧ್ಯಕ್ಷ ದಯಾನಂದ್, ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಆಶಾ ಮೋಹನ್ ಉಪಸ್ಥಿತರಿದ್ದರು. ಆಶಾಮೋಹನ್ ಪ್ರಾರ್ಥಿಸಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ ನಿರೂಪಿಸಿದರು, ಮಗ್ಗಲಮಕ್ಕಿ ಗಣೇಶ್ ಸ್ವಾಗತಿಸಿ, ಡಿ.ಎಸ್. ರವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News