ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿ ಸೂಚನೆ
ಚಿಕ್ಕಮಗಳೂರು, ಆ.28: ಪ.ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ.ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ಸಭೆಗೆ ಹಾಜರಾಗದೆ ಇದ್ದರೆ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳಿಗೆ ಶೇ. 80 ರಷ್ಟು ಕೆಲಸ ಆಗಬೇಕು. ತಮ್ಮ ಇಲಾಖೆಗೆ ಕಳುಹಿಸಿದ ಅರ್ಜಿಗಳನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.
ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ಕೆ.ಆರ್ ಐಡಿಎಲ್ ಗೆ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ನೀಡಲಾಗಿದೆ. 15 ವರ್ಷಗಳಾದರೂ ಇನ್ನೂ ಭವನ ಪೂರ್ಣಗೊಂಡಿಲ್ಲ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರ ಹುದ್ದೆಗೆ ಸಂಬಂಧಿಸಿದಂತೆ ಅಣ್ಣಯ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಖಾಯಂ ಶಸ್ತ್ರಚಿಕಿತ್ಸಕರ ಹುದ್ದೆ ಇದ್ದರೂ ಕೂಡ ಡಾ. ವಿನಯ್ ಎಂಬ ಖಾಸಗಿ ವೈದ್ಯರು ಬಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ನೀಡಿದ ಮನವಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲಾಸ್ಪತ್ರೆಯಲ್ಲಿ ಅಂತಹ ಘಟನೆ ನಡೆದಿದ್ದರೆ ದಾಖಲೆ ನೀಡುವಂತೆ ಅಣ್ಣಯ್ಯ ಅವರಿಗೆ ತಿಳಿಸಿದರು.
ತರೀಕೆರೆ ತಾಲೂಕು ಗಾಳಿಹಳ್ಳಿ ಗ್ರಾಮದ ಸ.ನಂ 101 ರಲ್ಲಿ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ತಹಸೀದ್ದಾರ್ ಕಚೇರಿಯಿಂದ ಪಡೆದು ಸರ್ವೇ ಮಾಡಿ ಕೂಡಲೇ ಕಡತವನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕಳುಹಿಸುವಂತೆ ತರೀಕೆರೆ ಉಪ ವಿಭಾಗಧಿಕಾರಿಗಳ ಕಛೇರಿ ಅಧೀಕ್ಷಕರಿಗೆ ಸೂಚಿಸಿದರು.
ತಾಲೂಕು ಮಟ್ಟದಲ್ಲಿ ದೌರ್ಜನ್ಯ ಸಮಿತಿ ಸಭೆಯನ್ನು 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಬೇಕು ನಂತರ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದ ಅವರು, ಶಿವಮೊಗ್ಗ ಜಿಲ್ಲೆಯ ಮಾಜಿ ಸೈನಿಕರಾದ ದೇವುಕುಮಾರ್ ಅವರು ಭೂಮಿ ಮಂಜೂರಾತಿಗೆ ನೀಡಿದ ಮನವಿಗೆ ತಮ್ಮ ಮನವಿಯನ್ನು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಗೆ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ವಿಭಾಗಾಧಿಕಾರಿ ಸಂಗಪ್ಪ, ಹೆಚ್ಚುವರಿ ಎಸ್ಪಿ ಜಗದೀಶ್ ಉಪಸ್ಥಿತರಿದ್ದರು.
‘ನಮ್ಮನ್ನು ಬಹಿಷ್ಕರಿಸಿದ್ದಾರೆ, ಕೆಲಸ ಕೊಡುತ್ತಿಲ್ಲ’
ಅಂಬಳೆ ಹೋಬಳಿ ಹಾದಿಹಳ್ಳಿ ಗ್ರಾಮದ ಪ.ಜಾತಿಯ ಜನರು ಅಹವಾಲು ನೀಡಿ, ಹಾದಿಹಳ್ಳಿಗೆ ಅಂಬೇಡ್ಕರ್ ಭವನ ನಿರ್ಮಿಸಲು ಗ್ರಾಮಠಾಣಾ ಜಾಗದಲ್ಲಿ ನಿವೇಶನ ಮಂಜೂರಾಗಿದೆ. ಅದರೆ ಅಲ್ಲಿನ ಗ್ರಾಮಸ್ಥರು ನಿವೇಶನ ಮಂಜೂರಾಗಿರುವ ಜಾಗದಲ್ಲಿ ಭವನ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ನಮಗೆ ನಿವೇಶನ ಮಂಜೂರಾಗಿರುವ ಸ್ಥಳದಲ್ಲೇ ಭವನ ನಿರ್ಮಿಸಲು ಅವಕಾಶ ಮಾಡಿಕೊಡಬೇಕು. ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟರಿಗೆ ಬಹಿಷ್ಕಾರ ಹಾಕಿದ್ದಾರೆ. ನಮ್ಮನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಇದರಿಂದ ಜೀವನಕ್ಕೆ ತುಂಬಾ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.ಈ ವೇಳೆ ಜಿಲ್ಲಾಧಿಕಾರಿ ಅಹವಾಲು ಸ್ವೀಕರಿಸಿ ಮಾತನಾಡಿ, ಗ್ರಾಮಗಳಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಬಾಳಬೇಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಪಿಡಿಒಗೆ ತಿಳಿಸಿದರು. ಈ ಬಗ್ಗೆ ಎರಡು ಕೋಮಿನ ಮುಖಂಡರ ಸಭೆ ಕರೆಯಲಾಗುವುದೆಂದು ಭರವಸೆ ನೀಡಿದರು.