ವಿದ್ಯಾರ್ಥಿಗಳು ಮಾನವೀಯ ಮೌಲ್ಯ, ದೇಶಾಭಿಮಾನ ಬೆಳೆಸಿಕೊಳ್ಳಬೇಕು: ಬಲರಾಂ
ಹಾಸನ, ಆ.28: ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಮಾನವೀಯ ಮೌಲ್ಯ ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳುವಂತೆ ಕ್ಷೇತ್ರದ ಶೀಕ್ಷಣಾಧಿಕಾರಿ ಬಲರಾಂ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಣ್ಣೀರುಹಳ್ಳದಲ್ಲಿರುವ ಹೊಯ್ಸಳ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಸನ ನಗರ 'ಎ' ವಿಭಾಗದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕ್ರೀಡೆ ಆಗಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಗೆಲುವು ಸಾಧಿಸಲು ಸಾಧ್ಯವಿಲ್ಲ. ಯಾರು ಸೋಲು ಅನುಭವಿಸುತ್ತಾರೆ ಅವರು ಇನ್ನು ಹೆಚ್ಚಿನ ಅಭ್ಯಾಸವನ್ನು ಮಾಡಿ ಮುಂದಿನ ಕ್ರೀಡೆಯಲ್ಲಿ ಗೆಲುವು ಸಾಧಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರತೀ ಮಕ್ಕಳು ಶಿಸ್ತಿನಿಂದ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಹಿಂದಿನ ಹಿರಿಯ ವಿದ್ಯಾರ್ಥಿಗಳನ್ನು ಕ್ರೀಡೆಯ ಒಳಗೆ ಯಾವ ಶಿಕ್ಷಕರು ಸೇರಿಸಿಕೊಳ್ಳಬಾರದು. ಹಾಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮಾತ್ರ ಇರಬೇಕು. ಕ್ರೀಡೆಯಲ್ಲಿ ತೀರ್ಪಗಾರರ ತೀರ್ಮಾನವೇ ಅಂತಿಮ. ಯಾವುದೇ ಅಡ್ಡಿ ಆತಂಕವಿಲ್ಲದೆ ಕ್ರೀಡಾಕೂಟ ನಡೆಸಲು ಶಿಕ್ಷಕರು ಜವಬ್ಧಾರಿಯುತವಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿ ಶುಭ ಹಾರೈಸಿದರು.
ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಮೂರ್ತಿ ಮಾತನಾಡಿ, ಶಿಕ್ಷಣ ಒಂದು ಅವಿಭಾಜ್ಯ ಅಂಗ. ಜೊತೆಯಲ್ಲಿ ಕ್ರೀಡೆ ಎಂಬುದು ಇದ್ದರೇ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಶಾರೀರಿಕವಾಗಿ ಆರೋಗ್ಯ ಚನ್ನಾಗಿದ್ದರೇ ಮಾತ್ರ ಸಾಧನೆ ಮಾಡಬಹುದು ಎಂದರು. ಅನೇಕರು ಆರೋಗ್ಯದ ಕೊರತೆಯಿಂದ ನಿರಾಸಕ್ತಿಯಲ್ಲಿ ಹಿಂದೆ ಬೀಳುತ್ತಾರೆ. ಶಿಕ್ಷಣದ ಜೊತೆಯಲ್ಲಿ ಆರೋಗ್ಯಕ್ಕೂ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.
ನಗರದ ಹೊಯ್ಸಳ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಭಾರತೀ ಮಂಜುನಾಥ್ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರೋತ್ಸಹ ನೀಡಬೇಕು. ಜಿಲ್ಲೆಯಲ್ಲಿ ಕ್ರೀಡೆಯಲ್ಲಿಯೇ ಅನೇಕರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಹಾಸನ ಜಿಲ್ಲೆ ಎಂದರೇ ಪ್ರತಿ ಕ್ಷೇತ್ರದಲ್ಲೂ ತನ್ನದೆ ಆದ ಹೆಸರು ಪಡೆದಿದೆ. ಹೆಚ್ಚಿನ ಅಭ್ಯಾಸದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದ ಶಾಲಾ ಹಾಗೂ ಜಿಲ್ಲೆಗೆ ಕೀರ್ತಿ ತರುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಯ್ಸಳ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಶೋಭನಾಗರಾಜು, ಪರಿವೀಕ್ಷಕ ಗೋವಿಂದೇಗೌಡ, ವೆಂಕಟೇಶ್ ಮೂರ್ತಿ, ವೇಧಣ್ಣ, ಪರಮೇಶ್, ಚಕ್ರಪಾಣಿ ಇತರರು ಪಾಲ್ಗೊಂಡಿದ್ದರು.