ಮಾಧ್ಯಮವನ್ನು ಗೌರವಿಸುವವರು ತುಸು ಕಿಸೆ ಬಿಚ್ಚಲಿ

Update: 2017-08-29 05:14 GMT

ಓದುಗ ಬಂಧುಗಳೇ,    

 ಇಂದು ನಿಮ್ಮ ವಾರ್ತಾಭಾರತಿ ದೈನಿಕವು ತನ್ನ ಸಾಹಸಪೂರ್ಣ ಪ್ರಯಾಣದ 14 ವರ್ಷ ಮುಗಿಸಿ 15ನೆ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಇದನ್ನು ಸಾಧ್ಯಗೊಳಿಸುವುದಕ್ಕೆ ಹೆಣಗಿದ, ನೆರವಾದ ಎಲ್ಲರಿಗೆ ಅಭಿನಂದನೆಗಳು. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿ ಒಂದು ಸಾವಿರ ಮಕ್ಕಳ ಪೈಕಿ 48 ಮಕ್ಕಳು ವಿವಿಧ ಕಾರಣಗಳಿಂದಾಗಿ ತಮಗೆ 5 ವರ್ಷ ಪೂರ್ತಿಯಾಗುವುದಕ್ಕೆ ಮುನ್ನವೇ ಸತ್ತು ಹೋಗುತ್ತಾರೆ. ಅಲ್ಪಾಯುಷ್ಯದ ಈ ಕಳವಳಕಾರಿ ಸಮಸ್ಯೆ ತಕ್ಕ ಮಟ್ಟಿಗೆ ಭಾರತದಲ್ಲಿ ಹುಟ್ಟಿಕೊಳ್ಳುವ ದಿನಪತ್ರಿಕೆಗಳಿಗೂ ಅನ್ವಯಿಸುತ್ತದೆ. ಹಲವಾರು ಆಶೆಗಳನ್ನು ಹೊತ್ತು, ಆದರ್ಶಗಳನ್ನು ಘೋಷಿಸಿ, ಆಶ್ವಾಸನೆಗಳನ್ನು ನೀಡಿ ಭಾರೀ ಸದ್ದು ಗದ್ದಲದೊಂದಿಗೆ ರಂಗಕ್ಕಿಳಿದ ಅದೆಷ್ಟೋ ದೈನಿಕಗಳು ಇಲ್ಲಿ ಅಲ್ಪ ಕಾಲದಲ್ಲೇ ಸದ್ದಿಲ್ಲದೆ ದಿವಂಗತವಾಗಿಬಿಟ್ಟಿವೆ. ಇಂತಹ ಸನ್ನಿವೇಶದಲ್ಲಿ ಒಂದು ಪತ್ರಿಕೆ ಬೇರೇನನ್ನೂ ಸಾಧಿಸದೆ ಕೇವಲ ತನ್ನ ಅಸ್ತಿತ್ವವನ್ನು ಉಳಿಸಿಕೊಂಡರೆ ಕೇವಲ ಆ ಕಾರಣಕ್ಕಾಗಿಯೇ ಅದನ್ನು ಅಭಿನಂದಿಸಬೇಕಾಗುತ್ತದೆ. ಆದರೆ ‘ವಾರ್ತಾ ಭಾರತಿ’ ಒಂದಷ್ಟು ಆಶಯಗಳು, ಮೌಲ್ಯಗಳು ಮತ್ತು ಆದರ್ಶಗಳ ಮೂಟೆ ಹೊತ್ತುಕೊಂಡು, ತನ್ನ ಬದ್ಧತೆಗಳು ತನ್ನ ಅಸ್ತಿತ್ವಕ್ಕಿಂತ ಸಾವಿರ ಪಟ್ಟು ಮುಖ್ಯ ಎಂದು ನಂಬಿಕೊಂಡು ಅಖಾಡಕ್ಕೆ ಇಳಿದ ಪತ್ರಿಕೆ. ಆದ್ದರಿಂದ ಇಂದು ನಮ್ಮ ಬಳಗ ಸಂತಸ ಪಡುತ್ತಿರುವುದಕ್ಕೆ ಮತ್ತು ನಮ್ಮ ವಿಶಾಲ ಓದುಗ ವಲಯವು ಮನಸಾರೆ ಹರ್ಷಿಸುತ್ತಿರುವುದಕ್ಕೆ ಆಯುಷ್ಯದ ಗಣನೆಗಿಂತ ತೀರಾ ಆಚೆಗಿನ ಹಲವು ಕಾರಣಗಳಿವೆ. ಅವೆಲ್ಲಾ ನಾವು ನಿತ್ಯ ಸ್ಮರಿಸಿಕೊಳ್ಳುವ ಮತ್ತು ನಮ್ಮ ಪ್ರತಿಯೊಂದು ಪುಟದಲ್ಲಿ ನಮ್ಮ ಓದುಗ ಕುಟುಂಬವು ನಿತ್ಯ ಗುರುತಿಸುವ ಕಾರಣಗಳಾದ್ದರಿಂದ ಅವುಗಳನ್ನಿಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಬೇಕಾದ ಅಗತ್ಯವಿಲ್ಲ. ಅದರ ಬದಲು ತಾನೊಂದು ಉದ್ಯಮವೋ, ವೃತ್ತಿಯೋ ಅಥವಾ ಬರೇ ಹಾದರವೋ ಎಂಬ ಗೊಂದಲವನ್ನು ತಾನೇದೊಡ್ಡ ಪ್ರಮಾಣದಲ್ಲಿ ಸೃಷ್ಟಿಸಿಟ್ಟಿರುವ ಮಾಧ್ಯಮ ರಂಗದ ಒಂದೆರಡು ನಿರ್ಣಾಯಕ ಬೆಳವಣಿಗೆಗಳ ಕುರಿತು ಚರ್ಚಿಸುವುದು ಹೆಚ್ಚು ಸಂಗತವೆನಿಸುತ್ತದೆ.

ಈ ಶತಮಾನ ಆರಂಭವಾಯಿತೆನ್ನುವಾಗ ಇನ್ನೇನು, ಪ್ರಿಂಟ್ ಮೀಡಿಯಾದ ಯುಗಾಂತ್ಯವೇ ಆಗಿಬಿಟ್ಟಿತೋ ಎಂಬಂತಹ ಊಹಾಪೋಹಗಳು ದಟ್ಟವಾಗಿ ಹಬ್ಬಿಕೊಂಡಿದ್ದವು. ಹೊಸ ಹೊಸ ಟಿವಿ ಚಾನೆಲ್‌ಗಳು ಆರಂಭವಾಗುತ್ತಾ, ಟಿವಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಪತ್ರಿಕಾರಂಗದ ಕುರಿತಂತೆ ಚರಮ ಗೀತೆಗಳು ಮೊಳಗತೊಡಗಿದ್ದವು. ಹಲವರು, ಅನೇಕ ಟೀವಿ ಚಾನೆಲ್‌ಗಳು ಕೂಡಾ ಮುಚ್ಚಿ ಹೋಗಿವೆ ಎಂಬ ವಾಸ್ತವವನ್ನು ಪ್ರಸ್ತಾಪಿಸದೆ, ಜಗತ್ತಿನಲ್ಲಿ ಎಷ್ಟು ಪತ್ರಿಕೆಗಳು ಮುಚ್ಚಿಹೋದವು ಮತ್ತು ಎಷ್ಟು ಪತ್ರಿಕೆಗಳು ಮುಚ್ಚುವ ಹಂತದಲ್ಲಿವೆ ಎಂಬ ಕುರಿತು ಗಣಿತ ಮಂಡನೆ ಆರಂಭಿಸಿ ಬಿಟ್ಟಿದ್ದರು. ಜಾಗತಿಕ ಮಟ್ಟದಲ್ಲಿ ಅಂತಹ ವಿದ್ಯಮಾನಗಳು ನಿಜಕ್ಕೂ ಕಂಡುಬಂದಿದ್ದವು. ಅಂತರ್ಜಾಲ ವಿಸ್ತರಿಸುತ್ತಾ ಹೋದಂತೆ ಒಂದೆಡೆ ಜಾಹೀರಾತುದಾರರು ತಮ್ಮ ಸಂಭಾವ್ಯ ಗ್ರಾಹಕರನ್ನು ತಲುಪಲು ಅಂತರ್ಜಾಲವನ್ನು ಅವಲಂಬಿಸ ತೊಡಗಿದರೆ ಇನ್ನೊಂದೆಡೆ ಹೊಸ ತಲೆಮಾರಿನ ವಾರ್ತೆ, ಮಾಹಿತಿ, ವಿಮರ್ಶೆ ಇತ್ಯಾದಿಗಳ ಗ್ರಾಹಕರು ಅವೆಲ್ಲವನ್ನೂ ಅಂತರ್ಜಾಲದಲ್ಲೇ ಅರಸಲಾರಂಭಿಸಿದರು. ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಫೋನ್‌ಗಳು ಮುದ್ರಿತ ಪತ್ರಿಕೆಗಳ ಪಾಲಿನ ಯುವ ಸವತಿಗಳಾಗಿ ಬಿಟ್ಟವು. ಜಾಹೀರಾತನ್ನೇ ಜೀವನಾಡಿಯಾಗಿಸಿಕೊಂಡಿದ್ದ ಅದೆಷ್ಟೋ ಪತ್ರಿಕೆಗಳು ಈ ಬೆಳವಣಿಗೆಗೆ ಒಗ್ಗಿಕೊಳ್ಳಲಾಗದೆ ನಿಧಾನವಾಗಿ ಅಕ್ಷರಶಃ ‘ನಿಧನ’ಗೊಂಡವು. 2001ರ ಹೊತ್ತಿಗಾಗಲೇ ಅಮೆರಿಕದಲ್ಲಿ ಪತ್ರಿಕೆಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು ಮಾತ್ರವಲ್ಲ, ಪೂರ್ಣಾವಧಿ ಪತ್ರಕರ್ತರ ಸಂಖ್ಯೆ ಕೂಡಾ ಶೇ.20ರಷ್ಟು ಕುಸಿದಿತ್ತು. ಇದಕ್ಕುತ್ತರವಾಗಿ ಹಲವು ಪತ್ರಿಕೆಗಳು ಕ್ರಮೇಣ ಪ್ರಸ್ತುತ ದೈತ್ಯ ಸವತಿಗೆ ಮಾನ್ಯತೆ ನೀಡಿ ಸ್ವತಃ ಅಂತರ್ಜಾಲದೊಳಕ್ಕೆ ಧುಮುಕಿದವು. ವರ್ಷಗಳು ಉರುಳಿದಂತೆ ಜಗತ್ತಿನ ಹೆಚ್ಚಿನೆಲ್ಲಾ ಪ್ರಮುಖ ಪತ್ರಿಕೆಗಳ ಮುದ್ರಿತ ಆವೃತ್ತಿಗೆ ಹೋಲಿಸಿದರೆ ನೆಟ್ ಆವೃತ್ತಿಯ ಓದುಗರ ಸಂಖ್ಯೆ ಹಲವು ಪಟ್ಟು ಅಧಿಕವಾಗಿ ಬಿಟ್ಟಿತು. ಬಹುತೇಕ ಎರಡು ಶತಮಾನಗಳಷ್ಟು ದೀರ್ಘ ಇತಿಹಾಸವಿರುವ ಇಂಗ್ಲೆಂಡಿನ ಜನಪ್ರಿಯ ‘ದಿ ಗಾರ್ಡಿಯನ್’ ಪತ್ರಿಕೆಯ ಮುದ್ರಿತ ಪ್ರತಿಗಳ ಸಂಖ್ಯೆ ಇಂದು ಕೇವಲ ಎರಡು ಲಕ್ಷಕ್ಕೆ ಸೀಮಿತವಾಗಿ ನಿಂತಿದ್ದರೆ, ನೆಟ್ ಮೂಲಕ ಅದನ್ನು ನಿತ್ಯ ಓದುವವರ ಸಂಖ್ಯೆ ಬಹುತೇಕ ನಾಲ್ಕು ಕೋಟಿಯ ಆಸುಪಾಸಿನಲ್ಲಿದೆ. ಆದರೆ ದುರಂತವೇನೆಂದರೆ ಆ ಪತ್ರಿಕೆಯ ನೆಟ್ ಆವೃತ್ತಿಯು ಈ ಅದ್ಭುತ ಅನುಪಾತಕ್ಕೆ ಸರಿದೂಗುವ ಪ್ರಮಾಣದಲ್ಲಿ ಜಾಹೀರಾತುಗಳನ್ನು ಆಕರ್ಷಿಸುತ್ತಿಲ್ಲ. ನೆಟ್ ಆವೃತ್ತಿಗೆ ಮುದ್ರಿತ ಆವೃತ್ತಿಗಿಂತ 200 ಪಟ್ಟು ಅಧಿಕ ಓದುಗರಿದ್ದರೂ, ನೆಟ್ ಆವೃತ್ತಿಗೆ ಸಿಗುತ್ತಿರುವ ಜಾಹೀರಾತು ಆದಾಯ ಮಾತ್ರ ತೀರಾ ಜುಜುಬಿ.

ಮಾಧ್ಯಮ ರಂಗಕ್ಕೆ ಸಂಬಂಧಿಸಿದಂತೆ ಜಗತ್ತಿನ ಎಲ್ಲೆಡೆಯ ಬೆಳವಣಿಗೆಗಳು ಒಂದೇ ತೆರನಾಗಿಲ್ಲ. ಉದಾಹರಣೆಗೆ, ಪಶ್ಚಿಮದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮುದ್ರಣ ಮಾಧ್ಯಮದ ಸ್ಥಿತಿ ಸಾಕಷ್ಟು ಆಶಾದಾಯಕವಾಗಿದೆ. ತಂತ್ರಜ್ಞಾನದಲ್ಲಿ ನಾವು ಅವರಿಗಿಂತ ಗಣನೀಯವಾಗಿ ಹಿಂದುಳಿದಿರುವುದರಿಂದ ಅಲ್ಲಿ ನಡೆದದ್ದು ಇಲ್ಲಿ ನಡೆಯುವುದಕ್ಕೆ ಕೆಲವಾರು ವರ್ಷಗಳು ತಗಲುತ್ತವೆ. ನಿಜವಾಗಿ ಅಲ್ಲಿ ಮುದ್ರಣ ಮಾಧ್ಯಮದ ಅವನತಿ ಆರಂಭವಾದ ದಿನಗಳಲ್ಲೇ ನಮ್ಮಲ್ಲಿ ಮುದ್ರಣ ಮಾಧ್ಯಮವು ಪ್ರಗತಿ ಸಾಧಿಸಲು ಆರಂಭಿಸಿತ್ತು. ಕಳೆದೊಂದು ದಶಕದಲ್ಲೂ, ಅಲ್ಲಿ ಪತ್ರಿಕೆಗಳ ಮುದ್ರಿತ ಪ್ರತಿಗಳ ಪ್ರಸಾರ ಕಡಿಮೆಯಾಗುತ್ತಾ ಸಾಗಿರುವಾಗ ಇಲ್ಲಿ ಅದು ಗಣನೀಯ ಹೆಚ್ಚಳ ಕಂಡಿದೆ. ಇಲ್ಲಿ ನೆಟ್ ಮೂಲಕ ಪತ್ರಿಕೆ ಓದುವವರ ಪ್ರಮಾಣ ಅಲ್ಲಿಯಷ್ಟು ಅಲ್ಲವಾದರೂ ಗಮನಾರ್ಹ ಎನ್ನುವಷ್ಟು ಹೆಚ್ಚಿದೆ. ಆದರೆ ಸಮಸ್ಯೆ ಏನೆಂದರೆ ನೆಟ್ ಮೂಲಕ ಪತ್ರಿಕೆಗಳನ್ನು ಓದುವ ಹೆಚ್ಚಿನವರು ಚಿಕ್ಕಾಸು ಕೊಡದೆ ಪುಕ್ಕಟೆಯಾಗಿ ಓದುವ ಚಾಳಿ ರೂಢಿಸಿಕೊಂಡಿದ್ದಾರೆ. ಆದ್ದರಿಂದ ಮಾಹಿತಿ, ವಾರ್ತೆ, ವಿಮರ್ಶೆ ಇತ್ಯಾದಿಗಳನ್ನು ಓದುಗ ಮಹಾಶಯರಿಗೆ ಉಚಿತವಾಗಿ ಉಣ ಬಡಿಸುವುದೇ ಪತ್ರಿಕೆಗಳ ಪಾಲಿನ ಕಾಯಕವಾಗಿಬಿಟ್ಟಿದೆ. ಈ ತರಹದ ಉಚಿತ ಓದುಗರ ಸಂಖ್ಯೆ ಎಷ್ಟು ಹೆಚ್ಚಿದರೂ ಆರ್ಥಿಕ ದೃಷ್ಟಿಯಿಂದ ಅದು ಪತ್ರಿಕೆಗಳ ಪಾಲಿಗೆ ಲಾಭದಾಯಕವಾಗಿರುವುದಿಲ್ಲ. ಭಾರತದಲ್ಲಿಂದು, ಸುದ್ದಿ, ವಿಮರ್ಶೆ ಇತ್ಯಾದಿಗಳನ್ನು ಒದಗಿಸುವ ಮತ್ತು ಬಹಳ ಶ್ರೇಷ್ಠ ಗುಣಮಟ್ಟವನ್ನು ಉಳಿಸಿಕೊಂಡಿರುವ ಹಲವಾರು ನಿಷ್ಪಕ್ಷ ನ್ಯೂಸ್ ಪೋರ್ಟಲ್‌ಗಳೂ ಇವೆ. ಸಾಮಾನ್ಯವಾಗಿ ಅವುಗಳ ಓದುಗರು ಕೂಡಾ ಪುಕ್ಕಟೆ ಓದುಗರೇ. ಇದರಿಂದಾಗಿ ಪತ್ರಿಕೆಗಳಂತೆ ಪ್ರಸ್ತುತ ನ್ಯೂಸ್ ಪೋರ್ಟಲ್‌ಗಳು ಕೂಡ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿವೆ.

ಸುದ್ದಿ ಮಾಧ್ಯಮಗಳು ಮುದ್ರಣ ರಂಗದಲ್ಲಿರಲಿ, ಅಂತರ್ಜಾಲದಲ್ಲಿರಲಿ, ಅವು ಸ್ವತಂತ್ರವಾಗಿದ್ದು, ತಮ್ಮ ವಸ್ತುನಿಷ್ಠೆಯನ್ನು ಉಳಿಸಿಕೊಳ್ಳಬೇಕಿದ್ದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕಾದುದು ತುಂಬಾ ಅಗತ್ಯ. ನಿಜ ಹೇಳಬೇಕೆಂದರೆ, ಮಾಧ್ಯಮಗಳು ಸಂಪೂರ್ಣವಾಗಿ ಸ್ವತಂತ್ರ ಹಾಗೂ ವಸ್ತುನಿಷ್ಠವಾಗಿರಬೇಕಿದ್ದರೆ, ಅವು ಜಾಹೀರಾತುಗಳ ಹಂಗಿನಿಂದಲೂ ಮುಕ್ತರಾಗಿರಬೇಕು. ನಮ್ಮ ದೇಶದಲ್ಲಿ ಅದು ಸಾಧ್ಯವಾಗಬೇಕಿದ್ದರೆ, ಇಲ್ಲಿ ಮಾಧ್ಯಮಗಳ ಬಳಕೆದಾರರು ಮಾಧ್ಯಮಗಳ ಮೂಲಕ ತಾವು ಪಡೆಯುವ ಮಾಹಿತಿಗಳಿಗೆ ನ್ಯಾಯೋಚಿತ ಬೆಲೆ ತೆರಲು ತಯಾರಾಗಿರಬೇಕು. ಪತ್ರಿಕೆಗಳನ್ನು ಓದುವವರು ಅವುಗಳ ಸದ್ಯದ ಮುಖ ಬೆಲೆಗಿಂತ ಕನಿಷ್ಠ ಮೂರು ಪಟ್ಟು ಅಧಿಕ ಬೆಲೆ (5 ರೂ. ಬದಲು 15 ರೂ.) ಕೊಟ್ಟು ಅವುಗಳನ್ನು ನಿತ್ಯ ಖರೀದಿಸುವುದಕ್ಕೆ ಸಿದ್ಧರಾಗಬೇಕು. ಹಾಗೆಯೇ ಅಂತರ್ಜಾಲದಲ್ಲಿ ಪೋರ್ಟಲ್‌ಗಳ ಬಳಕೆದಾರರು, ನ್ಯಾಯೋಚಿತ ಮಾಸಿಕ ಚಂದಾ ಪಾವತಿಸಲು ಮುಂದಾಗಬೇಕು. ಮಾಧ್ಯಮಗಳು ಫುಢಾರಿಗಳು, ಪುರೋಹಿತರು ಮತ್ತು ಕಾರ್ಪೊರೇಟ್ ಧಣಿಗಳ ಮುಖವಾಣಿಗಳಾಗುವುದನ್ನು ತಪ್ಪಿಸುವುದಕ್ಕೆ ಬೇರೆ ದಾರಿ ಯಾವುದೂ ಇಲ್ಲ. ಮಾಧ್ಯಮದ ಬಳಕೆದಾರರು ಬೆಲೆ ತೆರುವ ಬಳಕೆದಾರರಾದಾಗ, ಮಾಧ್ಯಮಗಳು ಸ್ವಲ್ಪ ಹೆಜ್ಜೆ ತಪ್ಪಿದರೂ ಅವುಗಳ ಕಿವಿ ಹಿಂಡಿ, ಅವುಗಳನ್ನು ಮತ್ತೆ ಸರಿ ದಾರಿಗೆ ತಂದು ನಿಲ್ಲಿಸುವ ನೈತಿಕ ಶಕ್ತಿ ಮತ್ತು ಅಧಿಕಾರ ಅವರಿಗಿರುತ್ತದೆ. ಎಲ್ಲವೂ ಉಚಿತವಾಗಿ ಅಥವಾ ಜುಜುಬಿ ದರಕ್ಕೆ ಸಿಗಬೇಕೆಂದು ಅಪೇಕ್ಷಿಸುವವರು, ಮಾಧ್ಯಮಗಳಿಂದ ಯಾವುದೇ ತರದ ತಾತ್ವಿಕ ಬದ್ಧತೆಯನ್ನು ನಿರೀಕ್ಷಿಸಬಾರದು. ಆದರ್ಶ ನಿಷ್ಠೆಯ ಜಾಗದಲ್ಲಿ ಬಹಿರಂಗ ಹಾದರದ ಬಳಕೆದಾರರಾಗಲು ಸಿದ್ಧರಾಗಬೇಕು. ದುರದೃಷ್ಟವಶಾತ್ ಇಂದು ಅಂತಹ ಸಿದ್ಧತೆ ಆರಂಭವಾಗಿ ಬಿಟ್ಟಿದೆಯೋ ಎಂದು ಭಯ ಪಡುವಂತಹ ಸನ್ನಿವೇಶವಿದೆ.

ಇದು ಮಾಧ್ಯಮ ರಂಗದ ಕುರಿತಂತೆ ಮೂಡಿರುವ ಒಂದು ಕಳವಳವಾದರೆ, ಅತ್ತ ಮಾಧ್ಯಮಗಳ ಸ್ವಾತಂತ್ರ ಮತ್ತು ಅದರ ಕುರಿತಂತೆ ನಮ್ಮ ಸಮಾಜ ಹಾಗೂ ಸರಕಾರವು ತಾಳಿರುವ ಧೋರಣೆಗಳು ಮತ್ತಷ್ಟು ಕಳವಳಕ್ಕೆ ಕಾರಣವಾಗಿವೆ. ಫ್ರಾನ್ಸ್ ಮೂಲದ, ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್‌ಎಸ್‌ಎಫ್) ಎಂಬ ಸಂಸ್ಥೆಯು ಪ್ರತಿ ವರ್ಷ ಜಗತ್ತಿನ ವಿವಿಧ ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರದ ಸ್ಥಿತಿ ಹೇಗಿದೆ ಎಂಬ ಕುರಿತು ಸಮೀಕ್ಷೆಯೊಂದನ್ನು ನಡೆಸುತ್ತದೆ. ಪರಿಸ್ಥಿತಿಯನ್ನು ಅಳೆಯುವುದಕ್ಕೆ ತನ್ನದೇ ಆದ ಸ್ಪಷ್ಟ ಮಾಪಕಗಳನ್ನು ಬಳಸುವ ಪ್ರಸ್ತುತ ಸಂಸ್ಥೆ, ಪ್ರತಿಯೊಂದು ದೇಶಕ್ಕೆ ನಿರ್ದಿಷ್ಟ ಅಂಕಗಳನ್ನು ಕೊಡುತ್ತದೆ. ಈ ಬಾರಿ ಈ ಸಂಸ್ಥೆಯು 180 ದೇಶಗಳ ಸಮೀಕ್ಷೆ ನಡೆಸಿದ್ದು ನಮ್ಮ ಪ್ರಜಾಸತ್ತಾತ್ಮಕ ದೇಶಕ್ಕೆ 136ನೆ ಸ್ಥಾನ ನೀಡಿದೆ. ಅಂದರೆ ಪತ್ರಿಕಾ ಸ್ವಾತಂತ್ರದ ವಿಷಯದಲ್ಲಿ ನಾವು ಜಗತ್ತಿನ 135 ದೇಶಗಳಿಗಿಂತ ಹಿಂದಿದ್ದೇವೆ. ಹಿಂದುತ್ವ ರಾಷ್ಟ್ರೀಯವಾದಿಗಳು ಸೃಷ್ಟಿಸಿರುವ ಭಯದ ವಾತಾವರಣ, ಸ್ವಾತಂತ್ರವನ್ನು ದಮನಿಸುವಂತಹ ಹಲವು ಕಾನೂನುಗಳು ಮತ್ತು ಪತ್ರಿಕಾ ಸ್ವಾತಂತ್ರವನ್ನು ರಕ್ಷಿಸುವ ವಿಷಯದಲ್ಲಿ ಸರಕಾರ ತಾಳಿರುವ ಅಸಡ್ಡೆಯ ನಿಲುವು ಇವೇ ಪ್ರಸ್ತುತ ಹೀನಾಯ ಸ್ಥಿತಿಗೆ ಪ್ರಮುಖ ಕಾರಣಗಳೆಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಇದು ಒಂದೆಡೆ ಪ್ರಜಾಸತ್ತಾತ್ಮಕ ಭಾರತದ ಎಲ್ಲ ನಾಗರಿಕರು ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿಯಾಗಿದ್ದರೆ ಇನ್ನೊಂದೆಡೆ ಪತ್ರಿಕಾ ಸ್ವಾತಂತ್ರದಲ್ಲಿ ನಂಬಿಕೆ ಇರುವ ಎಲ್ಲ ನಾಗರಿಕರ ನಿದ್ದೆಗೆಡಿಸಬೇಕಾದ ಬೆಳವಣಿಗೆಯಾಗಿದೆ. ಏಕೆಂದರೆ ಪತ್ರಿಕಾ ಸ್ವಾತಂತ್ರದ ಹರಣವು ನಿಜವಾಗಿ ಎಲ್ಲ ಸ್ವಾತಂತ್ರಗಳ ಹರಣಕ್ಕೆ ಮುನ್ನುಡಿಯಾಗಿರುತ್ತದೆ. ಈ ಸನ್ನಿವೇಶವನ್ನು ಸರಿಪಡಿಸಲು ಹೆಣಗಾಡಬೇಕಾದವರು ಕೇವಲ ಪತ್ರಕರ್ತರಲ್ಲ. ಇದು ಸ್ವಾತಂತ್ರದ ಬೆಲೆ ಬಲ್ಲ ಎಲ್ಲ ನಾಗರಿಕರ ತುರ್ತು ಕರ್ತವ್ಯವಾಗಿದೆ. ಬೆದರಿಕೆ ಮತ್ತು ಲಾಲಸೆಗಳ ಮುಂದೆ ಮೌಲ್ಯಗಳು ಮಂಡಿಯೂರಿರುವ ಇಂದಿನ ಸನ್ನಿವೇಶದಲ್ಲಿ, ನಿಮ್ಮ ‘ವಾರ್ತಾ ಭಾರತಿ’ ಬಳಗವು ಯಾವ ಬೆಲೆ ತೆತ್ತಾದರೂ ತನ್ನ ಘೋಷಿತ ಆದರ್ಶಗಳಿಗೆ ಬದ್ಧವಾಗಿ ಉಳಿಯುವುದೆಂದು ಭರವಸೆ ನೀಡುತ್ತಿದ್ದೇವೆ.

 ಎ.ಎಸ್.ಪುತ್ತಿಗೆ, ಪ್ರಧಾನ ಸಂಪಾದಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News