ರಾಜೀನಾಮೆ ಅಂಗೀಕಾರಕ್ಕೆ ಸಿಎಂಗೆ ಮನವಿ ಸಲ್ಲಿಸಿದ ರಮೇಶ್
ಮಡಿಕೇರಿ, ಆ.29 :ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ನೀಡಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲವೆಂದು ಟಿ.ಪಿ.ರಮೇಶ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತೊಂದು ಪತ್ರ ಬರೆದು ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ನಿಗಮದ ವಾಹನವನ್ನು ಕೂಡ ವಾಪಾಸ್ಸು ಕಳುಹಿಸಿರುವುದಾಗಿ ಹೇಳಿದ್ದಾರೆ.
ತೀವ್ರವಾಗಿ ನೊಂದಿರುವ ನಾನು ರಾಜಕೀಯದಿಂದ ಮತ್ತು ಹುದ್ದೆಯಿಂದ ದೂರ ಇರಲು ಬಯಸಿದ್ದೇನೆ. ನಡೆದ ವಿಚಾರಕ್ಕಾಗಿ ಈಗಾಗಲೇ ಎಲ್ಲರ ಬಳಿ ಕ್ಷಮೆ ಕೋರಿದ್ದೇನೆ. ಆದರೂ ಮತ್ತೆ ಮತ್ತೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ನನ್ನ ಬದುಕಿಗೆ ಸಂಚಕಾರ ಉಂಟು ಮಾಡುತ್ತಿರುವುದನ್ನು ನೋಡಿ ಮನಸ್ಸಿಗೆ ತೀರಾ ಆಘಾತವಾಗಿದೆ ಎಂದು ಟಿ.ಪಿ.ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿರುವ ಅವರು ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.